ಪೀಣ್ಯ- ನಾಗಸಂದ್ರವರೆಗೆ ಮೆಟ್ರೋ ಸಂಚಾರ ಸ್ಥಗಿತ
ಬೆಂಗಳೂರು.ಆ.೩೦- ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರ ನಿಲ್ದಾಣದವರೆಗೆ ಇಂದು, ಸೆ. ೬ ಮತ್ತು ೧೧ ರಂದು ಪೂರ್ಣ ದಿನ ಮೆಟ್ರೋ ಸೇವೆ ಸ್ಥಗಿತಗೊಂಡಿದೆ.
ವಿಸ್ತರಿಸಿದ ಮಾರ್ಗದಲ್ಲಿ ಮೆಟ್ರೋ ಸಿಗ್ನಲಿಂಗ್ ಪರೀಕ್ಷೆ ಹಿನ್ನೆಲೆ ಇಡೀ ದಿನ ಸಿಗ್ನಲಿಂಗ್ ಟೆಸ್ಟಿಂಗ್ ನಡೆಯಲಿದೆ.
ನಮ್ಮ ಮೆಟ್ರೋದ ಹಸಿರು ಮಾರ್ಗದ ನಾಗಸಂದ್ರ-ರೇಷ್ಮೆ ಸಂಸ್ಥೆ ನಡುವೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಿದೆ. ವಿಸ್ತರಿಸಿದ ಹಸಿರು ಮಾರ್ಗದ ನಾಗಸಂದ್ರದಿಂದ ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆ ಕೈಗೊಳ್ಳಲಾಗಿದೆ. ಹೀಗಾಗಿ ಕೆಲವು ದಿನಗಳು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರವರೆಗೆ ಮೆಟ್ರೋ ರೈಲು ಸಂಚಾರ ಇಂದು ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಪರದಾಡಿದರು. ಪ್ರಯಾಣಿಕರು ನಿಲ್ದಾಣಕ್ಕೆ ಬಂದು ವಾಪಸ್ಸು ಹೋಗುತ್ತಿದ್ದಾರೆ. ಮೆಟ್ರೋ ಸಂಚಾರ ಇಲ್ಲ, ಇದರಿಂದ ಸರಿಯಾದ ಸಮಯಕ್ಕೆ ಆಫೀಸ್‌ಗೆ ಹೋಗಲು ಆಗುತ್ತಿಲ್ಲ. ಆಟೋಗಳು ಬುಕ್ ಆಗುತ್ತಿಲ್ಲ, ಇಲ್ಲಿರುವ ಆಟೋದವರು ಮೀಟರ್ ಮೇಲೆ ೫೦ ರೂ. ಕೇಳುತ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಮೆಟ್ರೋ ಬೆಂಗಳೂರು ಜನರ ಜೀವನಾಡಿಯಾಗಿದೆ. ಸುಗಮ ಮತ್ತು ವೇಗದ ಸಂಚಾರಕ್ಕೆ ನಮ್ಮ ಮೆಟ್ರೋ ಬಹಳಷ್ಟು ಅನುಕೂಲಕಾರಿಯಾಗಿದೆ. ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ ೮ ಲಕ್ಷ ಜನರು ಸಂಚರಿಸುತ್ತಿದ್ದಾರೆ.