ಏಳು ಔಷಧಗಳು ಮಿಸ್ ಬ್ರಾಂಡೆಡ್ ಸಾಬೀತು
ಬೆಂಗಳೂರು, ಆ.೩೦-ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕಿಯ ಸರಬರಾಜು ನಿಗಮಕ್ಕೆ (ಕೆಎಸ್‌ಎಂಎಸ್‌ಸಿಎಲ್), ಎಂ, ಎಸ್. ಪುಷ್ಕರ್ ಫಾರ್ಮಾ ಕಂಪನಿ, ಸರಬರಾಜು ಮಾಡಿದ್ದ ನಂತರ ಕಣ್ಣು, ಕಿವಿ, ಮೂಗಿನ ೭ ಔಷಧಗಳು “ಮಿಸ್ ಬ್ರಾಂಡೆಡ್ ಎಂಬುದು ಸಾಬೀತಾಗಿದೆ.
ಪ್ರಾಣಿಗಳಿಗೆ ಬಳಸುವ ಔಷಧ ಸರಬರಾಜು ಮಾಡಿದ ಸಂಬಂಧಪಟ್ಟಂತೆ ದಾಖಲಾಗಿದ್ದ ದೂರಿನ ಮೇರೆಗೆ ಕೇಂದ್ರ ಔಷಧಗಳ ಪ್ರಮಾಣಿತ ನಿಯಂತ್ರಣ, ಔಷಧ ನಿಯಂತ್ರಣ ಇಲಾಖೆ ನಡೆಸಿದ್ದ ಪ್ರಯೋಗಾಲಯದ ಪರೀಕ್ಷೆ ವರದಿಯಲ್ಲಿ “ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ ಔಷಧವು “ಮಿಸ್ ಬ್ರಾಂಡೆಡ್ ಎಂದು ಬಹಿರಂಗವಾಗಿದೆ.
ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಹಾಗೂ ೧೯೪೦ ಕಾಯ್ದೆ ಪ್ರಕಾರ ತಪ್ಪು ಮಾಡಿದವರಿಗೆ ಕನಿಷ್ಠ ೧ ವರ್ಷ ಜೈಲು ಶಿಕ್ಷೆ ವಿಧಿಸಲು, ಸಾವಿರಾರು ರೂ. ದಂಡ ಹಾಕುವ ಅವಕಾಶ ಇದೆ. ಜತೆಗೆ,ಕಂಪನಿ ವಿರುದ್ಧ ಕ್ರಮಕೈಗೊಂಡು ಕಪ್ಪುಪಟ್ಟಿಗೆ ಸೇರಿಸಬೇಕಿತ್ತು. ಆದರೆ, ಇದ್ಯಾವ ಕಾರ್ಯವನ್ನು ಇಲಾಖೆ ಮಾಡಿಲ್ಲ. ಆ ಔಷಧವನ್ನು ಮುಟ್ಟುಗೋಲು ಹಾಕಿ ನಾಶ ಪಡಿಸುವ ಕೆಲಸವನ್ನು ಔಷಧ ನಿಯಂತ್ರಣ ಇಲಾಖೆಯೂ ಮಾಡಿಲ್ಲ.
ಕಣ್ಣು, ಕಿವಿ, ಮೂಗಿನ ಸಂಬಂಧಪಟ್ಟಂತೆ ವಿವಿಧ ಔಷಧ ಖರೀದಿಗಾಗಿ ನಿಗಮ, ೨೦೨೩ರ ಆಗಸ್ಟ್‌ನಲ್ಲಿ ಟೆಂಡರ್ ನಡೆಸಿತ್ತು. ಟೆಂಡರ್‌ನಲ್ಲಿ ಎಲ್ ಹಾಗೂ ೧ ಪುಷ್ಕರ್ ಫಾರ್ಮಾ ಕಂಪನಿ, ಔಷಧ ಉಗ್ರಾಣಗಳಿಗೆ, ಆರೋಗ್ಯ ಸಂಸ್ಥೆಗಳಿಗೆ ಪೂರೈಸಿದ್ದ ಔಷಧ ಮೇಲೆ ಪಶುಸಂಗೋಪನೆ ಮತ್ತು ಪಶುವೈದ್ಯಕಿಯ (ಎಎಚ್‌ವಿಎಸ್) ಲೇಬಲ್ ಇರುವುದು ಪತ್ತೆಯಾಗಿತ್ತು.
ಔಷಧಗಳ ಲೋಗೋಗ್ರಾಂನಲ್ಲಿ ಆರೋಗ್ಯ ಇಲಾಖೆ ಬದಲಿಗೆ “ಎಎಚ್‌ವಿಎಸ್ ಎಂದು ನಮೂದಿಸಲಾಗಿತ್ತು. ಬಳಿಕ, ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ ಉಲ್ಲಂಸಿ ನಿಗಮದ ಎಂಡಿ ಚಿದಾನಂದ ವಟಾರೆ, ಮಾಸ್ಕಿಂಗ್, ಟ್ಯಾಂಪರಿಂಗ್ ಮಾಡುವಂತೆ ಆದೇಶ ಹೊರಡಿಸಿದ್ದರು.
ಪುಷ್ಕರ್ ಫಾರ್ಮಾಗೆ ನೀಡಿದ್ದ ಪತ್ರದಲ್ಲಿ ಲೇಬಲ್ ಮರೆಮಾಚಲು ಅನುಮತಿ ಕೊಟ್ಟಿದ್ದರು. ಪುಷ್ಕರ್ ಫಾರ್ಮಾ ತಯಾರಿಸಿ ಸರಬರಾಜು ಮಾಡಿರುವ ಕೆಲವೊಂದು ಔಷಧಗಳ ಲೋಗೋಗ್ರಾಂ ವಿನ್ಯಾಸಕ್ಕೆ ಮಾಸ್ಕಿಂಗ್ (ಮರೆಮಾಚುವಿಕೆ) ಮಾಡಿರುವ ಔಷಧಗಳನ್ನು ಹಿಂಪಡೆಯುವಂತೆ ಕೊಡಗಿನ ಔಷಧ ಉಗ್ರಾಣದವರು ಮೈಸೂರು, ಕೊಡಗು ಜಿಲ್ಲೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದರು.