ಖಾಸಗಿ ಹೆಲ್ತ್ ಕೇರ್ ಸ್ವಚ್ಚತೆಗೆ ಆಧ್ಯತೆ ನಾಗರೀಕರ ಬಡಾವಣೆಗೆ ಬಾಧ್ಯತೆ ನಗರಸಭೆಯ ಕರ್ಮ(ಕಸ)ಕಾಂಡ
ಸಂಜೆವಾಣಿ ವಾರ್ತೆ
ಹನೂರು ಆ 3 :- ಚಾಮರಾಜ ನಗರ ನಾಗರೀಕರ ಸೇವೆಗೆ ಇರಬೇಕಾಗಿರುವ ಸ್ಥಳೀಯ ಸಂಸ್ಥೆಯು, ಕಾಸಿಗೆ ಕೈವೊಡ್ಡಿ, ನಾಗರೀಕ ಸೇವೆ ಮಾಡದೇ, ಖಾಸಗಿ ಹೆಲ್ತ್ ಕೇರ್ ಸ್ವಚ್ಚತೆಗೆ ಮುಂದಾಗಿದ್ದು, ಇದರಿಂದ ನಾಗರೀಕರು ಕೆಂಡ ಮಂಡಲಾಗಿದ್ದಾರೆ.
ಕರಿಕಲ್ಲು ಗಣಿ ಮಾಲೀಕ ಹಾಗೂ ಯಳಂದೂರಿನ ಅಶ್ವಿನಿ ಆಸ್ಪತ್ರೆಯ ಮಾಲೀಕ ಡಾ. ರಮೇಶ್ ಉಡುಪ, ಡಾ. ಶಶಿಕಲಾ ಉಡುಪ ರವರ ಮಾಲೀಕತ್ವದಲ್ಲಿ ಚಾಮರಾಜನಗರದಲ್ಲಿ ತೆರೆದಿರುವ ಅಶ್ವಿನಿ ಹೆಲ್ತ್ ಕೇರ್ ಗೆ ಇದೀಗ ನಗರಸಭೆಯಿಂದಲೇ ಸ್ವಚ್ಚತಾ ಕಾರ್ಯ ನಡೆಯುತ್ತಿದೆ, ಅದೂ ಪೇಯ್ಡ್ ಕ್ಲೀನಿಂಗ್ ಇದರಿಂದ ನೆರೆ ಹೊರೆಯ ನಿವಾಸಿಗಳು ಕೆಂಡಮಂಡಲರಾಗಿದ್ದಾರೆ.
ಚಾಮರಾಜನಗರ ಪಟ್ಟಣ ಪ್ರದೇಶದಲ್ಲಿ ಬಿದ್ದಿರುವ ಕಸ ವಿಲೆವಾರಿ ಮಾಡದ ನಗರಸಭೆಯ ಆಡಳಿತವು ಹಣದಾಸೆಗೆ ಖಾಸಗಿ ಆಸ್ಪತ್ರೆ ಸ್ವಚ್ಚತೆಗೆ ಮುಂದಾಗಿರುವ ಪ್ರಸಂಗವು ಇದೀಗ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದೆ.
ನಗರಸಭೆಯಿಂದ ಕಸ ವಿಲೆವಾರಿಗೆ ಇರುವ ಆಟೋಗಳು ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ನಗರದ ಭ್ರಮರಾಂಭ ಬಡಾವಣೆಯಲ್ಲಿರುವ ಅಶ್ವಿನಿ ಡಯಾಸ್ಟಿಕ್ ಸೆಂಟರ್ ನವರ ನಿರ್ವಹಣೆಯಲ್ಲಿರುವ ಹೆಲ್ತ್ ಕೇರ್ ಬಳಿ ಗಂಟೆಗಟ್ಟಲೇ ನಿಂತು, ಅಲ್ಲಿ ಹೊರ ಹಾಕುವ ಆಸ್ಪತ್ರೆಯ ತ್ಯಾಜ್ಯಗಳನ್ನು ತುಂಬಿಸಿಕೊಂಡು ನೇರವಾಗಿ ಯಡಬೆಟ್ಟ ಬಳಿ ಇರುವ ಘನತ್ಯಾಜ್ಯ ಘಟಕದಲ್ಲಿ ಹಾಕುತ್ತಿದ್ದಾರೆ. ಇದಕ್ಕೆ ಅಶ್ವಿನಿ ಹೆಲ್ತ್ ಕೇರ್ ನವರು ನಗರಸಭೆಯವರಿಗೆ ಇಂತಿಷ್ಟು ಅಂತ ಮಂತ್ಲಿ ಫಿಕ್ಸ್ ಮಾಡಿಕೊಂಡಿದ್ದಾರೆ ಎನ್ನುವ ಕಟು ಸತ್ಯ ಸಂಗತಿ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಹೇಳಿ ಕೇಳಿ ಭ್ರಮರಾಂಭ ಬಡಾವಣೆ, ಶಂಕರಪುರ ಬಡಾವಣೆ ಪುರಸಭೆಯ ಆಗಿದ್ದ ಕಾಲದಿಂದಲೂ ಇಂದಿನ ನಗರಸಭೆಯ ಕಾಲದ ವರೆಗೆ ಅತೀ ಹೆಚ್ಚು ಟ್ಯಾಕ್ಸ್ ವಸೂಲಾತಿಯಾಗುತ್ತಿರುವ ಏರಿಯಾ. ಜೊತೆಗೆ ಇದೇ ಬಡಾವಣೆಯಲ್ಲಿ ಸರ್ಕಾರಿ ಕಛೇರಿಗಳು, ವಸತಿ ಗೃಹ, ವಾಣಿಜ್ಯ ಕಟ್ಟಡಗಳು, ಪತ್ರಿಕಾಲಯ ಹಾಗೂ ಶಿಕ್ಷಣ ಸಂಸ್ಥೆ ಇರುವ ನಗರದ ಡಾಲರ್ಸ್ ಕಾಲೋನಿಯಾಗಿದೆ.
ಇಂತಹ ಬಡಾವಣೆಗೆ ರಸ್ತೆ ಬದಿ ಬೆಳೆದಿರುವ ಗಿಡಗಂಟೆಗಳು, ಸಂಗ್ರಹವಾಗಿರುವ ಕಸಗಳನ್ನು ತೆರವುಗೊಳಿಸಲು ಮೀನಾಮೇಷ ಎಣಿಸುವ ನಗರಸಭೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಯ ಒಂದು ಕರೆಗೆ ಕೈ ಕಟ್ಟಿ ನಿಂತು ಕೆಲಸ ಮಾಡುವರು ಇದು ನಾಗರೀಕರಲ್ಲಿ ಮೂಡಿರುವ ಯಕ್ಷ ಪ್ರಶ್ನೆಯಾಗಿದೆ.
ಬಡಾವಣೆಯಲ್ಲಿರುವ ಖಾಸಗಿ ಅಶ್ವಿನಿ ಹೆಲ್ತ್ ಕೇರ್ ಗೆ ನಿರ್ಮಾಣಕ್ಕೆ ಅನುಮತಿ ನೀಡದಂತೆ ಬಡಾವಣೆಯ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರೂ ಸಹ, ಹೆಲ್ತ್ ಕೇರ್ ಮಾಲೀಕರು ತಮ್ಮಲ್ಲಿರುವ ಹಣ ಮತ್ತು ರಾಜಕೀಯ ಪ್ರಭಾವ ಬೀರಿ ನಗರಸಭೆಯ ಅನುಮತಿ ಪಡೆದು ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವುಗೊಳಿಸಿ ನಾಗರೀಕರ ವಿರೋಧದ ನಡುವೆ ವಸತಿ ಬಡಾವಣೆಯಲ್ಲಿ ಹೆಲ್ತ್ ಕೇರೆ ಹಾಗೂ ಡಯಾಗ್ನೋಸ್ಟಿಕ್ಸ್ ಆರಂಭಿಸಿ ಅದರ ವೈದ್ಯಕೀಯ ಘನತ್ಯಾಜ್ಯ ಹಾಗೂ ಸಾಂಕ್ರಾಮಿಕ ರೋಗ ಹರಡುವ ತ್ಯಾಜ್ಯಗಳನ್ನು ಹೆಲ್ತ್ ಕೇರ್ ಹಿಂಭಾಗದಲ್ಲೇ ಹಾಕಿ ಸುಟ್ಟು ಹಾಕುತ್ತಾರೆ. ಈ ಕ್ರಿಯೆಗೆ ಅನುಮತಿ ಕೊಟ್ಟವರಾರು , ಚಾಮರಾಜನಗ ಕೇಂದ್ರ ಸ್ಥಾನದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಈ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಹೆಲ್ತ್ ಕೇರ್ ನ ಈ ಕೃತ್ಯದ ಬಗ್ಗೆ ನಗರಸಭೆಗೆ ದೂರಿದಾಗ ನಗರಸಭೆಯ ಆರೋಗ್ಯ ನಿರೀಕ್ಷಕ ನಾರಾಯಣ್ ಸ್ಥಳಕ್ಕೆ ಭೇಟಿ ನೀಡಿ, ಯಾವುದೇ ಕ್ರಮ ಕೈಗೊಳ್ಳದೇ ನಾಮಕಾವಸ್ತೆ ವಿಸಿಟ್ ಮಾಡಿದ್ದಾರೆ ವಿನಃ ಹೆಲ್ತ್ ಕೇರ್ ಗೆ ನೊಟೀಸ್ ಆಗಲಿ ದಂಡ ಹಾಕುವುದಾಗಲೀ ಮಾಡದೇ ಅವರು ನೀಡುವ ಭಕ್ಷಿಸ್ಸು ಪಡೆದು ಬಂದಿದ್ದಾರೆ ಎನ್ನುವ ಗುಸು ಗುಸು ಮಾತುಗಳು ಭಾರಿ ಶಬ್ದ ಮಾಡುತ್ತಿದೆ.
ಮಹಾತ್ಮ ಗಾಂಧೀಜಿರವರ 155ನೇ ಜಯಂತಿಯ ಅಂಗವಾಗಿ ರಾಜ್ಯವ್ಯಾಪಿ ಸ್ವಚ್ಛತಾ ಆಂದೋಲನ ದಿನಾಚರಣೆ ನಡೆಸುವ ಈ ಸುಸಂದರ್ಭದಲ್ಲಿ ನಗರಸಭೆಯ ಮುಖ್ಯ ರಸ್ತೆಗಳ ಕ್ಲಿನಿಂಗ್ ಕಣ್ಣೊರೆಸುವ ಆಡಳಿತ ಬಿಟ್ಟರೆ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಕ್ರಮಕೈಗೊಳ್ಳಲು ನಿಸ್ಸಹಾಯಕರಾಗಿದ್ದಾರೆ.ಇಂತಹ ಆಡಳಿತ ವೈಖರಿಯನ್ನು ಬೆಂಬಲಿಸಿ ನಿಂತಿರುವ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿದಿಗಳು ಚಾಮರಾಜನಗರ ಪಟ್ಟಣಕ್ಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ…..ಅಲ್ಲವೇ…?