ನಗರದಲ್ಲಿ ಮಹಾತ್ಮ ಗಾಂಧಿಜೀಯವರ ಜಯಂತಿ ಕಾರ್ಯಕ್ರಮದ ಅರ್ಥಪೂರ್ಣ ಆಚರಣೆ
ಸಂಜೆವಾಣಿ ವಾರ್ತೆ
ಚಾಮರಾಜನಗರ.ಅ.03:- ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಕಾರ್ಯಕ್ರಮವನ್ನು ಚಾಮರಾಜನಗರದ ಯಡಬೆಟ್ಟದಲ್ಲಿರುವ ಗಾಂಧಿಭವನದಲ್ಲಿಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಹೊರವಲಯದಲ್ಲಿರುವ ಯಡಬೆಟ್ಟ(ಯಡಪುರ)ದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯ ಪಕ್ಕದಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧಿಜೀ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲದೆ ವೇದಿಕೆ ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುμÁ್ಪರ್ಚನೆ ನೆರವೇರಿಸಿ ಗೌರವ ಸಲ್ಲಿಸಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಹಾತ್ಮ ಗಾಂಧಿಜೀಯವರು ಶಾಂತೀಧೂತ. ಗಾಂಧಿಜೀಯವರು ಅಳವಡಿಸಿಕೊಂಡಿದ್ದ ಸತ್ಯ. ಅಹಿಂಸೆಯ ಅವಿರತ ಹೋರಾಟದ ಮೂಲಕ ನಮಗಿಂದು ಸ್ವಾತಂತ್ರ್ಯ ಲಭಿಸಿದೆ. ಅಂತಹ ಮಹನೀಯರ ತ್ಯಾಗ, ಬಲಿದಾನವನ್ನು ನಾವು ಎಂದಿಗೂ ಮರೆಯಬಾರದು. ದೇಶದ ಸ್ವಾತಂತ್ರ್ಯಕ್ಕೆ ಗಾಂಧಿಜೀಯವರ ಕೊಡುಗೆ ಅಪಾರವಾಗಿದೆ ಎಂದರು.
ವೃತ್ತಿಯಲ್ಲಿ ವಕೀಲರಾಗಿದ್ದ ಗಾಂಧಿ ದಕ್ಷಿಣಾ ಆಫ್ರಿಕಾದಲ್ಲಿ ಸ್ವಾತಂತ್ರ ಹೋರಾಟ ಆರಂಭಿಸಿ ಯಶಸ್ಸು ಕಂಡಿದ್ದರು. ಗೋಪಾಲಕೃಷ್ಣ ಗೋಖಲೆಯವರಿಂದ ಸ್ಪೂರ್ತಿ ಪಡೆದು ಸಾಕಷ್ಟು ಹೋರಾಟ, ಸತ್ಯಾಗ್ರಹಗಳನ್ನು ಮಾಡಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅಪ್ಪಟ ದೇಶಪ್ರೇಮಿಯಾಗಿದ್ದ ಗಾಂಧಿಜೀ ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಿದ್ದರು. ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು.
ಗಾಂಧೀಜೀಯವರು ಗ್ರಾಮಗಳು ಅಭಿವೃದ್ಧಿಯಾದರೇ ಮಾತ್ರ ದೇಶ ಪ್ರಗತಿ ಕಾಣಲಿದೆ ಎಂದು ಪ್ರತಿಪಾದಿಸಿದ್ದರು ಎಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲಾಮಟ್ಟದಲ್ಲಿ ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ಗಣ್ಯರು ವಿತರಿಸಿದರು. ಪ್ರೌಢಶಾಲಾ ವಿಭಾಗದಲ್ಲಿ ನಂದನ ಪ್ರಥಮ ಸ್ಥಾನ, ಸಮೀಕ್ಷಾ ದ್ವಿತೀಯ, ಪಿ. ಐಶ್ವರ್ಯ ತೃತೀಯ ಹಾಗೂ ಪದವಿಪೂರ್ವ ಶಿಕ್ಷಣ ವಿಭಾಗದಲ್ಲಿ ಎಂ. ಶುಭ ಪ್ರಥಮ, ಪ್ರೀತಮ್ ವೈ. ಪೋಪತಾರ್ ದ್ವಿತೀಯ, ಎಂ. ರಂಜಿತ ತೃತೀಯ ಮತ್ತು ಪದವಿ, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಸಿಂಚನ ಪ್ರಥಮ, ಪಿ. ಜ್ಯೋತಿ ದ್ವಿತೀಯ, ಸಫೀನಾಜ್ ಅವರು ತೃತೀಯ ಬಹುಮಾನ ಪಡೆದರು.
ಕಾವೇರಿ ಜಲಾನಯನ ಯೋಜನಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನ, ನಗರಸಭೆ ಅಧ್ಯಕ್ಷರಾದ ಎಸ್. ಸುರೇಶ್, ಶಿವಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹದೇವಮ್ಮ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ. ಬಿ.ಟಿ. ಕವಿತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಗಿರಿಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ್, ವಾರ್ತಾ ಸಹಾಯಕರಾದ ಸುರೇಶ್‍ಕುಮಾರ್, ಗಣೇಶ್, ರಮೇಶ್, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗಾಂಧಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧಿಯವರಿಗೆ ಪ್ರಿಯವಾಗಿದ್ದ ಭಜನೆ ಗಾಯನವನ್ನು ಯಳಂದೂರು ತಾಲೂಕು ಮಾಬಳ್ಳಿಯ ಅರುಣ್‍ಕುಮಾರ್ ಮತ್ತು ತಂಡದವರು ನಡೆಸಿಕೊಟ್ಟರು. ಅಲ್ಲದೇ ಪುಟಾಣಿಗಳಿಂದ ಗಾಂಧಿಜೀ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ವಿವಿಧ ರಾಷ್ಟ್ರನಾಯಕರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಪ್ರದರ್ಶನ ಕಾರ್ಯಕ್ರಮದ ಗಮನ ಸೆಳೆಯಿತು.
ಕಾರ್ಯಕ್ರಮಕ್ಕೂ ಮೊದಲು ಗಾಂಧಿ ಭವನದ ಆವರಣ ಹಾಗೂ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಮುಂಭಾಗದ ಅವರಣದಲ್ಲಿ ಗಣ್ಯರು ಹಾಗೂ ವಿದ್ಯಾರ್ಥಿಗಳಿಂದ ಶ್ರಮದಾನ ನಡೆಯಿತು.