ಸಿಎಂ ವಿರುದ್ಧ ಇಡಿ ದೂರು ದಾಖಲು ಹಿಂದೆ ಕೇಂದ್ರ ಸಚಿವ ಎಚ್‍ಡಿಕೆ ಕೈವಾಡ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಸಂಜೆವಾಣಿ ನ್ಯೂಸ್
ಮೈಸೂರು: ಅ.03:- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ (ಇಡಿ) ಹಿಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕೈವಾಡ ಇದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಹೇಗಾದರೂ ಮಾಡಿ ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಬಿಜೆಪಿ-ಜೆಡಿಎಸ್ ಇನ್ನಿಲ್ಲದ ಆರೋಪಗಳನ್ನು ಮಾಡುತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆವರು ಮುಡಾಗೆ ಸಂಬಂಧಿಸಿದಂತೆ ಸೆ. 29 ರಂದು ಕೇಂದ್ರ ಸಚಿವ ಅಮಿತ್ ಶಾ ವ ಅವರಿಗೆ ಪತ್ರ ಬರೆದಿದ್ದರು. ಅವರ ಪತ್ರದ ಆಧಾರದ ಮೇಲೆ ಅಮಿತ್ ಶಾ ಸೂಚನೆ ಮೇರೆಗೆ ಇಡಿ ಪಿಎಂಎಲ್ ಆಕ್ಟ್ ಅಡಿ ಇಸಿಐಆರ್ ದಾಖಲಿಸಿಕೊಂಡಿದೆ. ಅದೇ ದಿನ ಸ್ನೇಹಮಯಿ ಕೃಷ್ಣ ಕೂಡ ಕುಮಾರಸ್ವಾಮಿ ಪತ್ರದ ಮಾಧರಿಯಲ್ಲೇ ಇಡಿಗೆ ಈ ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಇದೆಲ್ಲಾ ನೋಡಿದರೆ ವ್ಯವಸ್ಥಿತವಾಗಿ ಬಿಜೆಪಿ ಜೆಡಿಎಸ್ ನವರು ಮಾಡುತ್ತಿರುವುದು ತಿಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಆದ ದಿನದಿಂದಲೇ ಬಿಜೆಪಿ ಜೆಡಿಎಸ್ ನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಸಂಚನ್ನು ರೂಪಿಸುತ್ತಲೇ ಬಂದಿದ್ದರು. ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಸ್ನೇಹಮಯಿ ಕೃಷ್ಣನನ್ನು ಸಹ ಕಲಾವಿದ ಒಬ್ಬ ಜೋಕರ್ ಅಗಿ ಬಳಸಿಕೊಂಡು ಕೇಂದ್ರ ಸಚಿವ ಪ್ರಹ್ಲಾದ್ ಶಾ, ಅಶೋಕ, ವಿಜಯದ್ರ ನಿರ್ಮಾಪಕರಾಗಿ, ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹಣದ ವ್ಯವಹಾರವೇ ನಡೆದಿಲ್ಲವಾದರೂ ಹಾಗೂ ಏನೂ ಪಾತ್ರವಿಲ್ಲದಿದ್ದರೂ ಸಿದ್ದರಾಮಯ್ಯ ವಿರುದ್ಧ ‘ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ’ಯಡಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶದ ಪ್ರಕಾರ, ಲೋಕಾಯುಕ್ತ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆಯೇ ಇ.ಡಿ. ಪ್ರವೇಶಿಸಿರುವ ಆತುರವನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಬಿಜೆಪಿ-ಜೆಡಿಎಸ್ ನವರ ಆಪಾದನೆಯಿಂದ ನಿಂದು 14 ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಅವರ ಜಮೀನು ಅಕ್ರಮವಾಗಿ ವಶಕ್ಕೆ ಪಡೆದಿರುವ ಮುಡಾ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟಮಾಡಲಿದ್ದಾರೆ. ಶೇ.50:50 ಅನುಪಾತದಲ್ಲಿ 8 ಸಾವಿರ ನಿವೇಶನಗಳನ್ನು ಮುಡಾದಿಂದ ನೀಡಲಾಗಿದೆ ಎಂದು ಆರೋಪ ಮಾಡಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮತ್ತು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಈ ನಿವೇಶನಗಳನ್ನು ವಾಪಸ್ ಪಡೆಯಲು ವಾರದೊಳಗೆ ಹೋರಾಟಾ ಮಾಡಲಿ ಇಲ್ಲಾಂದರೆ ಕಾಂಗ್ರೆಸ್ ನವರು ಅವರ ಮನೆ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ-ಜೆಡಿಎಸ್ ನವರು ಎಷ್ಟೇ ಸಂಚು ಮಾಡಿದರು ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಇಡೀ ಕಾಂಗ್ರೆಸ್ ಪಕ್ಷ ಹಿಂದೆಂದೂ ಕಾಣದಷ್ಟು ಒಗ್ಗಟ್ಟಾಗಿದೆ. ಅವರ ಹಿಂದೆ ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.
ಕೇಂದ್ರದಲ್ಲಿ ಸಚಿವರಾಗಿರುವ 27 ಮಂದಿ ಮೇಲೆಬಕ್ರಿಮಿಲ್ ಪ್ರಕರಣಗಳು ದಾಖಲಾಗಿವೆ. ಅಮಿತ್ ಶಾ, ಶೋಭಾ ಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿ ಅವರ ಮೇಲು ಪ್ರಕರಣಗಳಿವೆ ಅವರು ಏಕೆ ರಾಜೀನಾಮೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್, ಜಿ.ಪಂ.ಮಾಜಿ ಅಧ್ಯಕಗಷ ಬಿ.ಎಂ.ರಾಮು, ಕಾಂಗ್ರೆಸ್ ಪಕ್ಷದ ನಗರ ಕಾರ್ಯದರ್ಶಿ ಶಿವಣ್ಣ, ಗಿರೀಶ್, ಮಾದ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.