ಪಿರಿಯಾಪಟ್ಟಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ ಬೆಟ್ಟದಪುರ:, ಆ.30- ಸಾವಿರಾರು ವರ್ಷಗಳ ಇತಿಹಾಸವಿರುವ ಸುಂದರ ಸಾಂಸ್ಕೃತಿಕ ಹಿನ್ನಲೆಯ ಭಾರತದಲ್ಲಿ ವಿಭಿನ್ನ ಸಂಸ್ಕೃತಿಗಳನ್ನು ಕಾಣಬಹುದು. ಈ ವೈವಿಧ್ಯಮಯ ಭಾರತದ ಹಲವು ಮುಖಗಳನ್ನು ಹಾಗೂ ಬಣ್ಣಗಳನ್ನು ಮಕ್ಕಳ ಪ್ರತಿಭಾ ಕಾರಂಜಿಯಲ್ಲಿ ಕಾಣುವಂತಾಗಿದೆ ಎಂದು ಶಿಕ್ಷಣ ಸಂಯೋಜಕ ಕೆ.ಎಂ ಸ್ವಾಮಿ ತಿಳಿಸಿದರು.
ಬೆಟ್ಟದಪುರದ ಚಾಣಕ್ಯ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಭಾರತ ದೇಶದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರಹೊಮ್ಮುವ ವೇದಿಕೆಯನ್ನು ಸೃಷ್ಟಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಜಾನಪದ ಕಲೆ, ಸಾಹಿತ್ಯ ಅಪಾರವಾಗಿದ್ದು ಪ್ರತಿಭಾನ್ವಿತರನ್ನು ಗುರುತಿಸಿ ಪೆÇ್ರೀತ್ಸಾಹ ನೀಡಬೇಕಿದೆ. ಅದಕ್ಕಾಗಿ ಮಕ್ಕಳು ಸಿಗುವಂತೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಗಮನ ಸೆಳೆದ ವೇಷಭೂಷಣ,
ಪ್ರತಿಭಾ ಕಾರಂಜಿ ಕಾರ್ಯಕ್ರಮ ಅಂದಮೇಲೆ ಮಕ್ಕಳ ಪ್ರತಿಭೆಯ ಅನಾವರಣದ ಪ್ರಮುಖ ವೇದಿಕೆಯಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಕ್ಲಸ್ಟರ್ ಮಟ್ಟದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆ ಹಾಗೂ ಮಾಹಿತಿ ಹಾಗೂ ನಮ್ಮ ಸಂಸ್ಕೃತಿ ಸಾರುವಂತಹ ಮಾಡಾಲಿಂಗ್, ವೇಷಭೂಷಣಗಳಲ್ಲಿ ಭಾಗವವಹಿಸಿ ಎಲ್ಲರ ಗಮನ ಸೆಳೆದರು. ಅದರಲ್ಲೂ ಇಲ್ಲಿನ ಎಸ್‍ಎಂಎಸ್ ಶಾಲೆಯ ವಿದ್ಯಾರ್ಥಿನಿ ಆರ್.ರನ್ವಿತ ಬೇಲೂರಿನ ಶಿಲಾಬಾಲಕಿ ವೇಷ ಧರಿಸಿ ಎಲ್ಲರ ಮೆಚ್ಚುಗೆ ಪಡೆದರು. ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಗಣ್ಯರು ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಯದುರಾಜ್, ಕಾರ್ಯದರ್ಶಿ ಜಗದೀಶ್, ನಿರ್ದೇಶಕ ಹರೀಶ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್, ಗುರುರಾಘವೇಂದ್ರ, ಮುಖ್ಯಶಿಕ್ಷಕ ಎಚ್.ಕೆ ತಿಮ್ಮಯ್ಯ, ಹಾರನಹಳ್ಳಿ ಕೆಪಿಎಸ್ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೆ.ಸಿ ಸತೀಶ್ ಸೇರಿದಂತೆ ವ್ಯಾಪ್ತಿಯ ಶಾಲಾಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.