ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಉತ್ತೇಜಿಸಬೇಕು: ಬನ್ನೂರು ರಾಜು
ಸಂಜೆವಾಣಿ ನ್ಯೂಸ್
ಮೈಸೂರು:ಆ.30:– ಹಾಕಿ ಎಂಬ ಕ್ರೀಡೆಯ ವಿಸ್ಮಯವಾಗಿ ತನ್ಮೂಲಕ ದೇಶಕ್ಕಾಗಿ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡು ದೇಶಾಭಿ ಮಾನದಿಂದ ಹಾಕಿ ಆಟವಾಡಿ ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕವಾಗಿ ಮೆರೆಸಿದ್ದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರು ಸಮಸ್ತ ಭಾರತೀಯರ ಹೆಮ್ಮೆಯೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಗುಣಗಾನ ಮಾಡಿ ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಪ್ರಸ್ತುತ ಇನ್ನೂ ಹೆಚ್ಚಿನದಾಗಿ ಉತ್ತೇಜಿಸುವ ಕೆಲಸ ಆಗಬೇಕಾಗಿದೆಯೆಂದು ಅಭಿಪ್ರಾಯ ಪಟ್ಟರು.
ನಗರದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತವಾಗಿ ಜ್ಯೋತಿ ನಗರದ ಎಂಸಿಸಿ ಕಾಲೋನಿಯ ಮೈಸೂರು ಉತ್ತರ ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇಜರ್ ಧ್ಯಾನ್ ಚಂದ್ ಅವರ ಅದ್ವಿತೀಯ ಹಾಕಿ ಆಟವನ್ನು ಕಣ್ಣಾರ ಕಂಡು ಬೆಕ್ಕಸ ಬೆರಗಾಗಿದ್ದ ಆಗಿನ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಅವರು,ಧ್ಯಾನ್ ಚಂದ್ ಗೆ ನಿನ್ನ ಭಾರತ ದೇಶವನ್ನು ಬಿಟ್ಟು ನನ್ನ ಜರ್ಮನಿ ದೇಶವನ್ನು ಪ್ರತಿನಿಧಿಸಿ ಆಡಿದರೆ ಸೇನೆಯಲ್ಲಿ ನಿಮಗೆ ಅತ್ಯುನ್ನತ ಹುದ್ದೆ ನೀಡಿ ಸಕಲ ಸವಲತ್ತುಗಳನ್ನೂ ಕೊಡುತ್ತೇನೆ ಬರುವಿರಾ ಎಂದು ಆಹ್ವಾನಿಸಿ ದಾಗ ನಾನು ಭಾರತೀಯ ಸೇನೆಯ ಮೇಜರ್ ಹುದ್ದೆಯಲ್ಲಿ ಸಂತೃಪ್ತ ನಾಗಿದ್ದು ನನ್ನ ದೇಶವೇ ನನ್ನ ಸರ್ವಸ್ವವಾಗಿದ್ದು ನೀವು ಸ್ವರ್ಗ ಕೊಟ್ಟರೂ ನನ್ನ ದೇಶ ಬಿಟ್ಟು ಇನ್ನೊಂದು ದೇಶದ ಪರ ಆಡಲಾರೆನೆಂದೂ, ಸ್ವರ್ಗಕ್ಕಿಂತಲೂ ನನ್ನ ದೇಶವೇ ದೊಡ್ಡದೆಂದು ಹಿಟ್ಲರ್ ಗೆ ಉತ್ತರಿಸಿದ್ದ ಮಹಾನ್ ದೇಶ ಪ್ರೇಮಿ ಕ್ರೀಡಾಪಟು ಧ್ಯಾನ್ ಚಂದ್ ರವರೆಂದರು.
ಮೇಜರ್ ಧ್ಯಾನ್ ಚಂದ್ ಕೇವಲ ಭಾರತದ ಜಗದ್ವಿಖ್ಯಾತ ಹಾಕಿ ಕ್ರೀಡಾ ಪಟುವಷ್ಟೇ ಆಗಿರಲಿಲ್ಲ. ಅಪ್ರತಿಮ ದೇಶ ಭಕ್ತರೂ ಹಾಗು ಅನನ್ಯ ದೇಶ ಪ್ರೇಮಿಯಾಗಿದ್ದರು. ತಮ್ಮಿಡೀ ಜೀವ – ಜೀವನವನ್ನು ಹಾಕಿ ಮೈದಾನದಲ್ಲಿಯೇ ಹಾಕಿ ಸ್ಟಿಕ್ ಹಿಡಿದು ಕಳೆದರು. ಕುಂತಲ್ಲಿ, ನಿಂತಲ್ಲಿ, ಕನಸಲ್ಲಿ, ಮನಸಲ್ಲಿ ಎಲ್ಲೆಲ್ಲೂ ಸದಾ ಹಾಕಿಯನ್ನೇ ಧ್ಯಾನಿಸುತ್ತಿದ್ದ ಧ್ಯಾನ್ ಚಂದ್, ಫಾದರ್ ಆಫ್ ಹಾಕಿ ಎಂದೇ ದೇಶದಲ್ಲಿ ಪ್ರಸಿದ್ಧರಾಗಿದ್ದರು. ಅಷ್ಟೇ ಅಲ್ಲ, ಒಲಂಪಿಕ್ ಕ್ರೀಡಾಕೂಟದಲ್ಲಿ ಸತತ ಮೂರು ಬಾರಿ ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟು ವಿಶ್ವದ ಕ್ರೀಡಾ ಚರಿತ್ರೆಯಲ್ಲಿ ದಾಖಲೆ ಬರೆದ ಅಸಾಧಾರಣ ಹಾಕಿ ಆಟಗಾರ. ಹಾಕಿ ನಮ್ಮ ಭಾರತದ ರಾಷ್ಟ್ರೀಯ ಕ್ರೀಡೆ.
ಇದರ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿ ಸಾಧನೆಗೈದವರಲ್ಲಿ ಬಹು ದೊಡ್ಡ ಹೆಸರು ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರದು. ಹಾಗಾಗಿ ಇವರ ಗೌರವಾರ್ಥ ನಮ್ಮ ಭಾರತ ದೇಶ ಧ್ಯಾನ್ ಚಂದ್ ಜನಿಸಿದ ಆಗಸ್ಟ್ 29ರ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಹೆಮ್ಮೆಯಿಂದ ದೇಶಾದ್ಯಂತ ಆಚರಿಸುತ್ತದೆಂದ ಬನ್ನೂರು ರಾಜು ಅವರು, ಧ್ಯಾನ್ ಚಂದ್ ವಿಶ್ವ ಕ್ರೀಡಾ ಇತಿಹಾಸದಲ್ಲಿ ಅದರಲ್ಲೂ ಹಾಕಿ ಕ್ರೀಡೆಯಲ್ಲಿ ಅಸಾಮಾನ್ಯರು, ಅದ್ವಿತೀಯರು, ಭಾರತವಷ್ಟೇ ಅಲ್ಲ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಪಟು. ಇಲ್ಲಿಯವರೆಗೆ ಇವರನ್ನು ಮೀರಿಸುವ ಅಥವಾ ಸರಿಗಟ್ಟುವ ಯಾವ ಹಾಕಿ ಆಟಗಾರನೂ ಜಗತ್ತಿನಲ್ಲಿ ಹುಟ್ಟಿಲ್ಲ ಎಂಬುದು ಅಚ್ಚರಿಯ ಚಾರಿತ್ರಿಕ ಸಂಗತಿಯಾಗಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಶಾಲಾ ಮಕ್ಕಳ ಸಮೂಹ ಪ್ರಾರ್ಥನೆಯೊಡನೆ ಆರಂಭವಾದ ಕಾರ್ಯಕ್ರಮದ ಲ್ಲಿ ಶಿಕ್ಷಕಿ ಜೆ.ಇಂದ್ರಾಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಇದೇ ವೇಳೆ ನಡೆದ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ. ಕಾವೇರಿಯಮ್ಮ ಅವರು ಬಹುಮಾನ ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್.ಲಕ್ಷ್ಮೀ ದೇವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕಿಯರಾದ ಬಿ.ಸಿ.ಉಷಾರಾಣಿ, ಇಂದ್ರಾಣಿ, ಚಿತ್ರಕಲಾ ಶಿಕ್ಷಕ ಮನೋಹರ್ ಮುಂತಾದವರು ಉಪಸ್ಥಿತರಿದ್ದರು. ವಿಶ್ರಾಂತ ಶಿಕ್ಷಕಿ ಹಾಗು ಗಾಯಕಿ ಎನ್. ಕೆ. ಕಾವೇರಿಯಮ್ಮ ಅವರು ಸುಶ್ರಾವ್ಯವಾಗಿ ಶಿಶು ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.