ಹೂಳು ಜಂಗಲ್ ತೆಗೆಸದ ಅಧಿಕಾರಿಗಳು:ಮಂಜು ಆಕ್ರೋಶ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.30: ಸಕಾಲದಲ್ಲಿ ನಾಲೆಗಳ ಹೂಳು ಮತ್ತು ಜಂಗಲ್ ಸ್ವಚ್ಚಗೊಳಿಸದೆ ರೈತರಿಗೆ ತೊಂದರೆ ನೀಡುತ್ತಿರುವ ನೀರಾವರಿ ಇಲಾಖೆಯ ಇಂಜಿನಿಯರುಗಳ ವಿರುದ್ದ ಶಾಸಕ ಹೆಚ್.ಟಿ.ಮಂಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೇಮಾವತಿ ಜಲಾಶಯ ಯೋಜನೆಯ ಚನ್ನರಾಯಪಟ್ಟಣ ವಿಭಾಗದ ಅದೀಕ್ಷಕ ಇಂಜಿನಿಯರ್ ಎಂ.ಎನ್.ಕಿಶೋರ್ ಜೊತೆ ತಾಲೂಕಿನ ಬೊಮ್ಮೇನಹಳ್ಳಿ, ಬೂಕನಕೆರೆ, ಮತ್ತೀಕೆರೆ, ಯಗಚಗುಪ್ಪೆ, ಹೊಸ ಮಾವಿನಕೆರೆ ಮುಂತಾದ ಕಡೆ ಹೇಮಾವತಿ ನದಿ ನಾಲೆಗಳ ಏರಿಯ ಮೇಲೆ ಸಂಚರಿಸಿದ ಶಾಸಕರು ನಾಲೆಗಳ ಕೊನೆಯ ಹಂತಕ್ಕೆ ಇದುವರೆಗೂ ನೀರು ಹರಿಯದಿರುವ ಬಗೆಗಿನ ರೈತರ ದೂರುಗಳನ್ನು ಆಲಿಸಿ ಇಂಜಿನಿಯರುಗಳ ವಿರುದ್ದ ಹರಿಯಾಯ್ದರು.
ನಾಲಾ ಬಯಲಿನಲ್ಲಿ ಸಂಚರಿಸಿ ನಾಲೆಗಳ ಪರಿಸ್ಥಿತಿ ಮತ್ತು ರೈತರ ಸಮಸ್ಯೆಗಳನ್ನು ಕಣ್ಣಾರೆ ಕಂಡ ಶಾಸಕರು ಅನಂತರ ರಾತ್ರಿ ಪಟ್ಟಣದ ಹೆಚ್.ಎಲ್.ಬಿ.ಸಿ ನಂ 03 ಉಪ ವಿಭಾಗದಲ್ಲಿ ಇಂಜಿನಿಯರುಗಳ ಸಭೆ ನಡೆಸಿ ಅವರ ಕಾರ್ಯವೈಕರಿಯ ವಿರುದ್ದ ಕಿಡಿಕಾರಿದರು.
ತಾಲೂಕು ವ್ಯಾಪ್ತಿಯ ನಾಲೆಗಳ ಹೂಳು ತೆಗೆದು ಜಂಗಲ್ ಕಟ್ಟಿಂಗ್ ಕಾರ್ಯಕ್ಕೆ ರಾಜ್ಯ ಸರ್ಕಾರ 1ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದೆ. ಆದರೆ ಇಂಜಿನಯರುಗಳು ಅನುದಾನ ಬಳಸಿ ಹೂಳು ಮತ್ತು ಜಂಗಲ್ ಕಟ್ಟಿಂಗ್ ಮಾಡಿಸುವಲ್ಲಿ ಅಸಡ್ಡೆ ತೋರಿದ್ದಾರೆ. ಹರಿಯುತ್ತಿರುವ ನಾಲೆಯ ನೀರಿನಲ್ಲಿಯೇ ಜೆಸಿಬಿ ಯಂತ್ರಗಳ ಮೂಲಕ ನೀರು ಕಲಕಿ ರಾಡಿ ಎಬ್ಬಿಸುವ ಮೂಲಕ ಹೂಳೆತ್ತುವ ನಾಟಕ ಮಾಡಲಾಗಿದೆ. ಕೆಲವು ಕಡೆ ತೆಗೆದ ಹೂಳನ್ನು ನಾಲೆಯ ಏರಿಯ ಮೇಲೆ ಹಾಕಿ ರೈತರು ತಿರುಗಾಟಕ್ಕೆ ತೊಂದರೆ ಪಡಿಸಲಾಗಿದೆಯಲ್ಲದೆ ಎತ್ತಿದ ಹೂಳು ಮತ್ತೆ ಕಾಲುವೆಗೆ ಬೀಳುವಂತೆ ಮಾಡಲಾಗಿದೆ. ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು, ಹೇಮಾವತಿ ಮುಖ್ಯನಾಲೆಯ ಸರಪಳಿ 49, 55, 58 ಸೇರಿದಂತೆ ವಿತರಣಾ ನಾಲೆಗಳ ಹೂಳು ಮತ್ತು ಜಂಗಲ್ ತೆಗೆಸಿ ನಾಲಾ ವ್ಯಾಪ್ತಿಯ ಕೊನೆಯ ಬಯಲಿನ ರೈತರಿಗೆ ನೀರು ತಲುಪಿಸುವ ಕೆಲಸ ಮಾಡಬೇಕು. ಹೇಮಾವತಿ ಅಣೆಕಟ್ಟೆ ತುಂಬಿದ್ದರೂ ನಮ್ಮ ರೈತರು ನೀರಿಗಾಗಿ ಪರಿತಪಿಸುವ ಸನ್ನಿವೇಶವನ್ನು ಇಂಜಿನಿಯರುಗಳು ಸೃಷ್ಠಿ ಮಾಡಿದ್ದಾರೆ. ಶಿಲ್ಟ್ ಮತ್ತು ಜಂಗಲ್ ತೆಗೆಸಿ ರೈತರಿಗೆ ನೀರು ಕೊಡದಿದ್ದರೆ ನಾನು ಶಾಸಕ ಎನ್ನುವುದನ್ನು ಮರೆತು ರೈತರೊಂದಿಗೆ ಕಛೇರಿಯ ಮುಂದೆ ಮಲಗುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ಅಧಿಕಾರಿಗಳ ಸಭೆಯಲ್ಲಿ ಎಚ್ಚರಿಸಿದರು.
ಸಿಬ್ಬಂಧಿ ಕೊರತೆ:- ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂಧಿಗಳ ಕೊರತೆಯಿದೆ. ಇಲ್ಲಿನ ಕಛೇರಿಯ ಅನೇಕ ನೌಕರರನ್ನು ರಾಜ್ಯ ಸರ್ಕಾರ ಡೆಪ್ಯೂಟೇಷನ್ ಮಾಡಿ ಬೇರೆ ಕಡೆ ನಿಯೋಜಿಸಿದೆ. ಅಗತ್ಯ ಸಿಬ್ಬಂದಿಗಳಿಲ್ಲದೆ ನಾವು ಕರ್ತವ್ಯ ನಿರ್ವಹಿಸುವುದಾದರೂ ಹೇಗೆ ಎಂದು ಕೆಲವು ಇಂಜಿನಿಯರುಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಬೇರೆಡೆ ನಿಯೋಜನೆಗೊಂಡಿರುವ ಸಿಬ್ಬಂಧಿಗಳ ಡೆಪ್ಯೂಟೇಷನ್ ರದ್ದುಪಡಿಸಿ ಅವರನ್ನು ಕೇಂದ್ರ ಸ್ಥಾನಕ್ಕೆ ಕರೆಸಿಕೊಳ್ಳುವ ಬಗ್ಗೆ ಸಭೆಯಲ್ಲಿದ್ದ ಅಧೀಕ್ಷಕ ಇಂಜಿನಿಯರ್ ಅವರಿಗೆ ಶಾಸಕರು ಸೂಚಿಸಿದರು.
ಹಳೆಯ ತೂಬುಗಳನ್ನು ಸರಿಪಡಿಸಿ:- ತಾಲೂಕಿನ ಹೇಮಗಿರಿ ನಾಲೆ ಶತಮಾನಗಳಷ್ಟು ಹಳೆಯದಾಗಿದ್ದು ಹಲವು ಕಡೆ ನಾಲೆಯ ನೀರು ವಿತರಣಾ ತೂಬುಗಳು ಹಾಳಾಗಿವೆ. ಇದರ ಪರಿಣಾಮ ಈ ನಾಲಾ ವ್ಯಾಪ್ತಿಯ ರೈತರು ಜಮೀನುಗಳಿಗೆ ಅಗತ್ಯವಾದ ನೀರು ಬಿಡಲು ಮತ್ತು ಅನಗತ್ಯವಾದಾಗ ನೀರು ನಿಲ್ಲಿಸಲು ನಾಲೆಗಳಲ್ಲಿ ಮುಳುಗೇಳಬೇಕಾದ ಸ್ಥಿತಿಯಿದೆ. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದರೂ ಇಲಾಖೆಯ ಇಂಜಿನಿಯರುಗಳು ಮಾತ್ರ ಅಗತ್ಯ ಎಸ್ಟಿಮೇಟ್ ಮಾಡಿ ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸುತ್ತಿಲ್ಲ. ನಾಲೆಯಲ್ಲಿ ಮುಳುಗಿ ರೈತರು ಸಾಯುವ ಮುನ್ನ ಹಾಳಾಗಿರುವ ತೂಬುಗಳನ್ನು ಸರಿಪಡಿಸುವಂತೆ ಶಾಸಕರು ಸೂಚಿಸಿದರು.
ಬಿಲೋ ಟೆಂಡರ್ ಸಮಸ್ಯೆ:- ಕಾಮಗಾರಿ ನಿರ್ವಹಣೆಗೆ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆದರೆ ಕೆಲವು ಗುತ್ತಿಗೆದಾರರು ಬಿಲೋ ಟೆಂಡರ್ ಹಾಕಿಕೊಂಡು ಕಾಮಗಾರಿ ಗುತ್ತಿಗೆ ಪಡೆಯುತ್ತಾರೆ. ಇದರಿಂದಾಗಿ ರಾಜ್ಯ ಮುಂದಿನ ಆರ್ಥಿಕ ವರ್ಷದಲ್ಲಿ ಕಾಮಗಾರಿಗೆ ಹಿಂದಿನ ಸಾಲಿನ ಬಿಲೋ ಟೆಂಡರ್ ಹಣವನ್ನು ಮಾತ್ರ ನೀಡುತ್ತದೆ. ಮತ್ತೆ ಗುತ್ತಿಗೆದಾರರು ಸರ್ಕಾರ ನಿಗಧಿಪಡಿಸಿದ ಅಂದಾಜು ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕುತ್ತಾರೆ. ಇದರಿಂದ ಮರುವರ್ಷ ಮತ್ತೆ ಇಲಾಖೆಗೆ ಬರಬೇಕಾದ ಅನುದಾನದಲ್ಲಿ ಕಡಿಮೆ ಹಣ ನಿಗಧಿಯಾಗುತ್ತಿದೆ. ಬಿಲೋ ಟೆಂಡರ್ ಹಾಕಿದ ಗುತ್ತಿಗೆದಾರರು ಸಕಾಲಕ್ಕೆ ಕಾಮಗಾರಿ ನಿರ್ವಹಿಸದೆ ಇಲಾಖೆಯ ಪ್ರಗತಿಗೆ ತಲೆನೋವಾಗುತ್ತಿದ್ದಾರೆಂದು ಕೆಲವು ಇಂಜಿನಿಯರುಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯ ಮುಂದೆ ಬಿಚ್ಚಿಟ್ಟರು.
ಪೆನ್ ಬಳಸಿ: ಅಧೀಕ್ಷಕ ಎಂಜಿನಯರ್ ಸ್ಥಳಕ್ಕೆ ಬಂದಿದ್ದರೂ ಕೆಲವು ಇಂಜಿನಿಯರುಗಳು ಸ್ಥಳಕೆ ಬರಲಿಲ್ಲ. ಸ್ವತ: ಅಧೀಕ್ಷಕ ಎಂಜಿನಿಯರ್ ಎಂ.ಎನ್.ಕಿಶೋರ್ ಮೊಬೈಲ್ ಕರೆ ಮಾಡಿದರೂ ಕೆಲವು ಇಂಜಿನಿಯರುಗಳು ಅವರ ಕರೆಯನ್ನು ಸ್ವೀಕರಿಸದೆ ಕಟ್ ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಶಾಸಕ ಹೆಚ್.ಟಿ. ಮಂಜು ಕಾವೇರಿ ನೀರಾವರಿ ನಿಗಮದ ಎಂ.ಡಿ ಜೊತೆ ದೂರವಾಣಿಯ ಮೂಲಕ ಮಾತನಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದರಲ್ಲದೆ ಅಧೀಕ್ಷಕ ಇಂಜಿನಿಯರ್ ಕರೆ ಮಾಡಿದರೂ ಸ್ವೀಕರಿಸದೆ ಅಸಡ್ಡೆ ಮಾಡುತ್ತಿರುವ ಎಂಜಿನಿಯರುಗಳ ವಿರುದ್ದ ಪೆನ್ ಬಳಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಹೇಮಾವತಿ ಜಲಾಶಯ ಯೋಜನೆಯ ಅಧೀಕ್ಷಕ ಎಂಜಿನಿಯರ್ ಎಂ.ಎನ್.ಕಿಶೋರ್, ಕಾರ್ಯಪಾಲಕ ಅಭಿಯಂತರ ಆನಂದ್, ಸಹಾಯಕ ಕಾರ್ಯಪಾಕ ಅಭಿಯಂತರ ವಿಶ್ವನಾಥ್, ಸಹಾಯಕ ಕಾರ್ಯಪಾಕ ಎಂಜಿನಿಯರ್ ಸುಧಾ, ಇಂಜಿನಿಯರುಗಳಾದ ಆನಂದ ನಾಯಕ್, ಮಹೇಶ್, ರಾಘವೇಂದ್ರ ಸೇರಿದಂತೆ ಹಲವರು ಸಭೆಯಲ್ಲಿದ್ದರು.