ಡಿ.ದೇವರಾಜಅರಸು ಭವನವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟನೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಆ.30:- ದೇಶದ ಅತ್ಯಂತ ಜನಾನುರಾಗಿ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ತಲುಪುವಂತೆ ಕಾರ್ಯಕ್ರಮಗಳನ್ನು ರೂಪಿಸಿದ ಮಹಾನ್ ನಾಯಕ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಕಾಳೇನಹಳ್ಳಿ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಡಿ.ದೇವರಾಜಅರಸು ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು ಅವರ ಹೆಸರಿನಲ್ಲಿ ರಾಜ್ಯದ ಲಕ್ಷಾಂತರ ಕುಟುಂಬಗಳು ಬದುಕು ನಡೆಸುತ್ತಿದ್ದು ಉಳುವವನೇ ಭೂಮಿಯ ಒಡೆಯ ಎಂಬ ಐತಿಹಾಸಿಕ ಕಾನೂನನ್ನು ಜಾರಿಗೆ ತಂದ ಅವರ ರಾಜಕೀಯ ಜೀವನ ದೇಶಕ್ಕೆ ಮಾದರಿ ಎಂದರು.
ಗರಡಿಯಲ್ಲಿ ಪಳಗಿ ರಾಜಕೀಯ ಜೀವನ ಆರಂಭಿಸಿದ ನೂರಾರು ಮಂದಿ ರಾಜ್ಯದ ಅಭಿವೃದ್ದಿಗೆ ಕಂಕಣ ಬದ್ದರಾಗಿ ಕೆಲಸ ಮಾಡುತ್ತಿದ್ದು ಅರಸರು ನಮ್ಮ ಜಿಲ್ಲೆಯಲ್ಲಿ ಜನಿಸಿದ್ದು ಎಲ್ಲರ ಪುಣ್ಯ ವಿಶೇಷವಾಗಿದ್ದು ಅವರ ಆದರ್ಶಗಳನ್ನು ಪ್ರತಿಯೊಬ್ಬರು ಚಾಚೂ ತಪ್ಪದೆ ಪಾಲಿಸಬೇಕೆಂದು ತಿಳಿಸಿದರು.
ಯುವ ರಾಜಕಾರಣಿಗಳು ಮತ್ತು ಹಲವು ನಾಯಕರುಗಳನ್ನು ಬೆಳೆಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಡಿ.ದೇವರಾಜಅಸರು ಅವರಿಗೆ ಸಲ್ಲಲಿದ್ದು ಇದರೊಂದಿಗೆ ಅವರ ಅಧಿಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೂ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ಇಂದು ರೈತರ ಬದುಕು ಹಸನಾಗಿದ್ದು ಬಡವರ ಏಳಿಗೆಗೆ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದ ಅವರು ರಾಜಕೀಯ ದ್ರುವತಾರೆ ಎಂದು ಬಣ್ಣಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಮಾತನಾಡಿ ಒಂದು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಡಿ.ದೇವರಾಜ ಅರಸ ಭವನಕ್ಕೆ ಸೆ.1ರಿಂದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಛೇರಿಯನ್ನು ಸ್ಥಳಾಂತರ ಮಾಡುವುದರ ಜತೆಗೆ ಅರಸರಿಗೆ ಸಂಬಂಧಿತ ಕಾರ್ಯಕ್ರಮಗಳನ್ನು ಮುಂದೆ ಇಲ್ಲಿಯೇ ನಡೆಸುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ನಿರ್ದೇಶಕರಾದ ಕೆ.ಎನ್.ಪ್ರಸನ್ನಕುಮಾರ್, ಸರಿತಾಜವರಪ್ಪ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಜಿ.ಪಂ ಮಾಜಿ ಸದಸ್ಯರಾದ ಮಾರ್ಚಹಳ್ಳಿಶಿವರಾಮು, ಜಿ.ಆರ್.ರಾಮೇಗೌಡ, ಜಯರಾಮೇಗೌಡ, ಪುರಸಭೆ ಸದಸ್ಯರಾದ ಶಿವುನಾಯಕ್, ಶಂಕರ್, ನಟರಾಜು, ಶಂಕರ್‍ಸ್ವಾಮಿ, ಮಾಜಿ ಸದಸ್ಯ ಕೆ.ವಿನಯ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್‍ಜಾಬೀರ್, ಮುಖಂಡರಾದ ಗರುಡಗಂಭಸ್ವಾಮಿ, ಹೆಚ್.ಎಸ್.ವೇಣುಗೋಪಾಲ್, ಲೋಕೇಶ್, ನವೀದ್, ನಂದೀಶ್, ಕಂಠಿಕುಮಾರ್, ಆದರ್ಶ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಚಂದ್ರಕಲಾ, ಬಿಇಒ ಆರ್.ಕೃಷ್ಣಪ್ಪ ಸೇರಿದಂತೆ ಮತ್ತಿತರರು ಹಾಜರಿದರು.