ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಧಮಕಿ ಹಾಕಿಲ್ಲ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.30- ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳಿಗೆ ಯಾವುದೇ ರೀತಿಯ ಧಮಕಿ ಹಾಕಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ. ಮಂಜುನಾಥ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶಿವಕುಮಾರ್ ಅವರು, ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳಿಗೆ ಯಾವುದೇ ರೀತಿಯ ಧಮಕಿ ಹಾಕಿದ್ದೇನೆ ಎಂದು ಆರೋಪ ಮಾಡಿರುತ್ತಾರೆ. ಆದಿಕರ್ನಾಟಕ ಅಭಿವೃದ್ದಿ ಸಂಘದ ವಿಚಾರದಲ್ಲಿ ಗಡಿ ಕಟ್ಟೆ ಯಜಮಾನರ ನಿರ್ಣಯವಾಗುತ್ತಿದೆ. ಸಮಾಜದ ಆಸ್ತಿ ಸರಂಕ್ಷಣೆ ವಿಚಾರದಲ್ಲಿ ವಿಳಂಬ ಮಾಡಿದರೆ ಒಳಿತು ಎಂಬ ಸಲಹೆಯನ್ನು ನೀಡಿದ್ದೇವೆ ವಿನಹ ಯಾವುದೇ ರೀತಿ ಬೆದರಿಕೆ ಹಾಕಿಲ್ಲ ನಮ್ಮಗಳ ವಿರುದ್ದ ಪೂರ್ವಗ್ರಹ ಪೀಡಿತರಾಗಿ ಮಾತನಾಡುತ್ತಿದ್ದಾರೆ. ಆದಿ ಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿ ರಕ್ಷಣೆ ಹಾಗೂ ಸಂಘ ಆಸ್ತಿಯನ್ನು ಉಳಿಸುವಲ್ಲಿ ನಮ್ಮ ಬೆಂಬಲ ಸದಾ ಇದೆ. ಆದರೆ, ಈ ಹೆಸರಿನಲ್ಲಿ ಪದೇ ಪದೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಕ್ರಮ ಕೈಗೊಳ್ಳಿ ಎಂದು ಒತ್ತಾಯ ಮಾಡುವುದನ್ನು ಶಿವಕುಮಾರ್ ಬಿಡಬೇಕು. ಸರ್ಕಾರ ಹಾಗು ಜಿಲ್ಲಾಡಳಿತ ಯಾವ ಕ್ರಮ ಕೈಗೊಂಡರು ಸಹ ನಮ್ಮ ಸಹಮತವಿದೆ ಎಂದರು.
ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಅಕ್ರಮವಾಗಿ ಅಸ್ತಿ ಪರಭಾರೆ ಮಾಡಿಕೊಂಡಿರುವವರು ಜೈಲಿನಲ್ಲಿದ್ದಾರೆ. ತನಿಖೆ ನಡೆಯುತ್ತಿದೆ. ಅದಿ ಕರ್ನಾಟಕ ಅಭಿವೃದ್ದಿ ಸಂಘದ ಪರವಾಗಿ ಹಾಗೂ ಸಂರಕ್ಷಣಾ ಸಮಿತಿಯ ವಿರುದ್ದವಾಗಿಯು ನಾನು ಇಲ್ಲ. ನಮಗೆ ಸಮಾಜಕ್ಕೆ ನೀಡಿರುವ ಆಸ್ತಿ ಅದಿಕರ್ನಾಟಕ ಸಮಾಜದಲ್ಲಿಯೇ ಉಳಿದುಕೊಳ್ಳಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಇದನ್ನು ಶಿವಕುಮಾರ್ ಅವರು ಅರ್ಥ ಮಾಡಿಕೊಂಡು ಮಾತನಾಡುವುದು ಉಳಿತು. ನಮ್ಮ ವಿರುದ್ದ ಎಫ್‍ಆರ್‍ಐ ದಾಖಲು ಮಾಡಿ ಎಂದು ಹೇಳುವ ಮೂಲಕ ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಶಿವಕುಮಾರ್ ಮಾಡುತ್ತಿದ್ದಾರೆ. ಯಾರು ಧಮಕಿ ಹಾಕುತ್ತಾರೆ ಎಂಬುದು ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಾಜದ ಜನರಿಗೆ ತಿಳಿದಿದೆ ಎಂದು ಮಂಜುನಾಥ್ ತಿಳಿಸಿದರು.
ಆದಿ ಕರ್ನಾಟಕ ಸಮಾಜಕ್ಕೆ ನೀಡಿರುವ ಆಸ್ತಿಯು ಶೈಕ್ಷಣಿಕ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂಬುದು ಸತ್ಯ. ಆದೇ ರೀತಿ ಇತರೇ ಸಮಾಜಗಳಿಗೂ ಸಹ ಶೈಕ್ಷಣೀಕ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಿ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತ ಜಾಗವನ್ನು ನೀಡಿದೆ. ಕಾಲ ಕಾಲಕ್ಕೆ ಬದಲಾವಣೆಗೆ ಅನುಗುಣವಾಗಿ ಅದಾಯಕ್ಕಾಗಿ ಮಳಿಗೆ ಇತರೇ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ನಾವು ಸಭೆಯಲ್ಲಿ ಕೇವಲ ಅದಿ ಕರ್ನಾಟಕ ಅಭಿವೃದ್ದಿ ಸಂಘಕ್ಕೆ ನೀಡಿರುವ ಕಟ್ಟಡ ವಿರುದ್ದ ಮಾತನಾಡುವ ಅಧಿಕಾರಿಗಳು ಇತರೇ ಸಮಾಜಗಳಿಗೆ ನೀಡಿರುವ ಉದ್ದೇಶವು ಸರಿಯಾಗಿದೆಯೇ ಎಂಬ ಪ್ರಶ್ನೆ ನಮ್ಮದಾಗಿದೆ. ಇದಕ್ಕೆ ಅಪರ ಜಿಲ್ಲಾಧಿಕಾರಿಗಳು ಸಹ ಬಹಳ ಸ್ಪಷ್ಟವಾಗಿ ಸಮಾಧಾನದಿಂದ ಉತ್ತರ ನೀಡಿದ್ದಾರೆ. ಸಭೆಯಲ್ಲಿ ಭಾಗವಹಿಸದ ಶಿವಕುಮಾರ್ ಅಧಿಕಾರಿಗಳಿಗೆ ಧಮಕಿ ಹಾಕಿದ್ದಾರೆ ಎಂದು ಹೇಳಿವುದು ಹಾಸ್ಯಾಸ್ಪದವಾಗಿದೆ ಎಂದು ಸಿ.ಕೆ. ಮಂಜುನಾಥ್ ತಿಳಿಸಿದರು.
ಶಿವಕುಮಾರ್ ಅವರು ದ್ವಂದ್ವ ನಿಲುವು ಹೊಂದಿದ್ದು, ನಾಯಕ ಸಮಾಜದವರು, ಕುರುಬ ಸಮಾಜದವರು ಶೈಕ್ಷಣಿಕ ಉದ್ದೇಶವನ್ನು ಬಿಟ್ಟು ವಾಣಿಜ್ಯ ಮಳಿಗೆ ಕಟ್ಟಿರುವುದನ್ನು ಸಮರ್ಥಿಸಿಕೊಂಡು ಸರಿಯಾಗಿದೆ ಎನ್ನುತ್ತಾರೆ. ಆದರೆ, ಅದಿ ಕರ್ನಾಟಕ ಅಭಿವೃದ್ದಿ ಸಂಘ ವಿಚಾರದಲ್ಲಿ ಕಾನೂನು ಬಾಹಿರವಾಗಿ ವಾಣಿಜ್ಯ ಮಳಿಗೆಗೆ ಕಟ್ಟಿದ್ದಾರೆ ಎಂದು ದೂರು ನೀಡಿದ್ದೀರಿ. ಇದು ನಿಮ್ಮಲ್ಲಿರುವ ದ್ವಂದ್ವ ನಿಲುವುವನ್ನು ಬಿಡಬೇಕು ಎಂದರು.
ಗೋಷ್ಠಿಯಲ್ಲಿ ದಲಿತ ಮುಖಂಡರಾದ ಸೋಮಸುಂದರ್, ಪರಶಿವಮೂರ್ತಿ, ಕೋಡಸೋಗೆ ಪ್ರಸಾದ್, ಬಸವಣ್ಣ ಇತರರರು ಇದ್ದರು.