ಕೇಂದ್ರದ ಯೋಜನೆ ಸಮರ್ಪಕ ಜಾರಿಗೆ ಡಿಸಿ ಸೂಚನೆ
ಕೋಲಾರ, ಆ,೩೦-’ಕೇಂದ್ರ ಸರ್ಕಾರದ ಆತ್ಮ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸ ಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಮಂಗಳ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆತ್ಮ ಯೋಜನೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ’ರೈತರಿಗೆ ನೂತನ ಕೃಷಿ ತಂತ್ರಜ್ಞಾನ ಕುರಿತು ಅರಿವು ಮೂಡಿಸಲು ಹಾಗೂ ಕೃಷಿ ಅಭಿವೃದ್ಧಿಗೆ ಪೂರಕವಾಗಿ ತರಬೇತಿ ಕಾರ್ಯಾಗಾರ ನಡೆಸಬೇಕು’ ಎಂದು ಹೇಳಿದರು.
’ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಇಳುವರಿ ತೆಗೆಯುವ ನಿಟ್ಟಿನಲ್ಲಿ ರೈತರಿಗೆ ವಿವಿಧ ರೀತಿಯ ತರಬೇತಿ ನೀಡಲು ಕೇಂದ್ರ ಸರ್ಕಾರವೇ ಸೂಚಿಸಿದೆ. ಇದನ್ನು ಕಾರ್ಯಗತ ಗೊಳಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಗ್ರಾಮಗಳಿಗೆ ತೆರಳಿ ರೈತರನ್ನು ಸಂಪರ್ಕಿಸಿ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಜತೆಗೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
’ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದು, ಕೊಳವೆ ಬಾವಿಗಳಲ್ಲಿ ಅಂತರ್ಜಲ ಬತ್ತಿದೆ. ನೀರಿನ ಸಮಸ್ಯೆಯ ಕಾರಣಕ್ಕೆ ರೈತರು ತೋಟಗಾರಿಕೆ, ಕೃಷಿ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದಾರೆ. ನೀರು ಲಭ್ಯವಿರುವ ರೈತರು ಮಾಹಿತಿ ಕೊರತೆಯಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರಿಗೆ ಕೃಷಿ ಕುರಿತು ಮಾಹಿತಿ ನೀಡಬೇಕು’ ಎಂದು ತಿಳಿಸಿದರು.
ರೂ.೧.೪೮ಕೋಟಿ ಅನುದಾನ: ’ಯೋಜನೆಗೆ ರೂ.೧.೪೮ ಕೋಟಿ ಅನುದಾನ ಮೀಸಲಿಟ್ಟಿದ್ದು, ಈ ಪೈಕಿ ಈವರೆಗೆ ರೂ.೦.೩೨ಕೋಟಿ ಬಿಡುಗಡೆಯಾಗಿದ್ದು, ರೂ.೨೮ಲಕ್ಷ ವೆಚ್ಚವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಎಂ. ಆರ್. ಸುಮ ಮಾಹಿತಿ ನೀಡಿದರು.
’ಯೋಜನೆಯಡಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸಲು ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಸಿಬ್ಬಂದಿ ಇರುತ್ತಾರೆ. ಇವರು ನೇರವಾಗಿ ರೈತರನ್ನು ಸಂಪರ್ಕಿಸಿ ಚರ್ಚೆ ನಡೆಸುತ್ತಾರೆ. ಕೃಷಿ ಅಭಿವೃದ್ಧಿಗೆ ಪೂರಕವಾದ ತರಬೇತಿ, ಗುಂಪು ರಚನೆ, ಬೀಜ ಧನ ಹೀಗೆ ಅನೇಕ ಕಾರ್ಯಕ್ರಮ ನಡೆಸಲಾಗುವುದು. ಪ್ರತಿ ಗ್ರಾಮದಲ್ಲೂ ರೈತರ ಗುಂಪು ರಚಿಸಿ ಸೌರ್ಕಯ ಕಲ್ಪಿಸಲಾಗುವುದು’ ಎಂದರು.
ಕೃಷಿ ಇಲಾಖೆ ಉಪ ನಿರ್ದೇಶಕರಾದ ಭವ್ಯರಾಣಿ, ರೇಷ್ಮೇ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಪಶುಸಂಗೋಪನ ಉಪನಿರ್ದೇಶಕ ತುಲಸಿ ರಾಮಯ್ಯ, ಎಲ್ಲಾ ಕೃಷಿ ಸಹಾಯಕ ನಿರ್ದೇಶಕರು, ಸಮಿತಿಯ ಸದಸ್ಯರಾದ ಪ್ರಗತಿಪರ ರೈತರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.