ಯಾರಂಘಟ್ಟದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ
ಕೋಲಾರ,ಆ,೩೦-ತಾಲೂಕಿನ ಯಾರಂಘಟ್ಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ, ಇದೇ ವೇಳೆ ಹಳೆಯ ವಿದ್ಯಾರ್ಥಿಗಳ ಸಭೆ ನಡೆಯಿತು. ಹಳೆಯ ವಿದ್ಯಾರ್ಥಿ ಗಿರೀಶ್ ಮಾತನಾಡಿ, ಶಾಲೆಯಲ್ಲಿ ಈ ಹಿಂದೆ ಇದ್ದ ಶಿಕ್ಷಕರು ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದು, ಪೋಷಕರಿಗೂ ಸ್ಪಂದಿಸುತ್ತಿರಲಿಲ್ಲ. ಯಾವ ಕಾರ್ಯಕ್ರಮಕ್ಕೂ ಆಹ್ವಾನಿಸುತ್ತಿರಲಿಲ್ಲ. ಇದರಿಂದಾಗಿ ಹಳೆಯ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಬೇಸರ ಉಂಟಾಗಿತ್ತು ಎಂದು ಹೇಳಿದರು.
ಶಾಲೆಯ ಅಭಿವೃದ್ಧಿಯೂ ನಡೆದಿರಲಿಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ಸಾಕಷ್ಟು ಅನಾನುಕೂಲವಾಗಿತ್ತು. ಆದರೆ ಇದೀಗ ಬಂದಿರುವ ಶಿಕ್ಷಕರು ಎಲ್ಲ ರೀತಿಯಲ್ಲಿಯೂ ಸ್ಪಂದಿಸುತ್ತಿದ್ದು, ಅವರಿಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡಿ ಖಾಸಗಿ ಶಾಲೆಗಿಂತಲೂ ಯಾವ ರೀತಿಯಲ್ಲೂ ಕಡಿಮೆ ಇರದಂತೆ ನಮ್ಮ ಶಾಲೆಯನ್ನು ಅಭಿವೃದ್ಧಿಪಡಿಸಿ ಸರಕಾರಿ ಶಾಲೆ ಉಳಿವಿಗೆ ಪಣತೊಡೋಣ ಎಂದು ಹೇಳಿದರು.
ಹಳೆಯ ವಿದ್ಯಾರ್ಥಿ ಶಶಿಕುಮಾರ್, ಸಂತೋಷ್, ಗ್ರಾಪಂ ಸದಸ್ಯ ಜಯಣ್ಣ, ಸಿಆರ್‌ಪಿ ಕೆ.ಸಿ.ಮುನಿರಾಜು, ಶಿಕ್ಷಕರಾದ ವಿನೋದ, ವೆಂಕಟರಾಮೇಗೌಡ, ವಿದ್ಯಾರ್ಥಿಗಳಾದ ಮುನಿರಾಜು, ಪ್ರವೀಣ್, ಹರೀಶ್, ಕಿಶೋರ್, ಶಿವು, ರವಿ, ವಿಜೇಂದ್ರ, ನವೀನ್, ಕುಮಾರ್ ರಮೇಶ್, ಅಂಬರೀಶ್ ಇದ್ದರು.