ಹೊರಗುತ್ತಿಗೆ ನೌಕರರ ಸಮಸ್ಯೆಗಳ ಸ್ಪಂದನೆಗೆ ಮನವಿ
ಕೋಲಾರ,ಆ,೩೦-ಕೆಜಿಎಫ್‌ನ ಬೆಮೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಕಂಪನಿಯ ಸೌಲಭ್ಯಗಳಿಂದ ವಂಚಿತರಾಗಿದ್ದು ನೌಕರರ ಸಮಸ್ಯೆಗಳಿಗೆ ಸ್ಪಂಧಿಸುವಂತೆ ಬೆಮೆಲ್‌ನ ಕೇಂದ್ರವಲಯದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಭೇಟಿ ಮಾಡಿ ಸಂಸದ ಎಂ.ಮಲ್ಲೇಶ್ ಬಾಬು ಮನವಿ ಸಲ್ಲಿಸಿದರು.
ಕೋಲಾರ ಲೋಕಸಭಾ ವ್ಯಾಪ್ತಿಯ ಕೆ.ಜಿ.ಎಫ್‌ನಲ್ಲಿರುವ ಬೆಮೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಕಳೆದ ೨೫ ವರ್ಷದಿಂದ ಹೊರಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರನ್ನು ಖಾಯಂ ನೌಕರರಾಗಿ ಮಾಡುವಂತೆ ಹಾಗೂ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಬೆಮೆಲ್‌ನ ನೌಕರರು ಸಂಸದರನ್ನು ಭೇಟಿ ಮಾಡಿ ಅಳಲನ್ನು ತೋಡಿಕೊಂಡಿದ್ದರು.
ಬೆಮೆಲ್‌ನ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಬುಧವಾರ ಬೆಂಗಳೂರಿನಲ್ಲಿರುವ ಬೆಮೆಲ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಹಾಗೂ ನಿರ್ದೇಶಕ ಹೆಚ್.ಆರ್.ಸತ್ಯಪತಿ ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿ ಮನವಿ ಸಲ್ಲಿಸಲಾಯಿತು.ಬೆಮೆಲ್‌ನ ಅಧಿಕಾರಿಗಳು ಕಾರ್ಮಿಕರ ಬೇಡಿಕೆಗಳನ್ನು ಸಂಸದರಿಂದ ಆಲಿಸಿ ಶೀಘ್ರದಲ್ಲಿಯೇ ನೌಕರರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.