ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಲು ಕರೆ
ಕೋಲಾರ,ಆ.೩೦- ಬಂಗಾರಪೇಟೆ ತಾಲೂಕಿನ ಹಂಚಾಳಗೇಟ್‌ನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಡಾ.ಎಂ.ಚಂದ್ರಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬದಲಾದ ಪರೀಕ್ಷಾ ಪದ್ದತಿಗೆ ವಿದ್ಯಾರ್ಥಿಗಳು ಹೇಗೆ ಸಿದ್ದಪಡಿಸಿಕೊಳ್ಳಬೇಕು, ಪಾಠ ಪ್ರವಚನಗಳಲ್ಲಿ ಶಾಲೆಯ ಪಠ್ಯೇತರ ಚಟುವಟಿಕಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮತ್ತು ಶಾಲೆಗೆ ಗೈರು ಹಾಜರಾಗದಂತೆ ಪೋಷಕರು ಗಮನಿಸಬೇಕೆಂದು ಸಲಹೆ ನೀಡಿದರು.
ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ಉತ್ತಮ ಬ್ಯಾಂದವ್ಯದಿಂದ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಕಾರಣರಾಗಬೇಕು. ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಂಡು ಗುರು ಹಿರಿಯರ ಮಾರ್ಗದರ್ಶನದಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ರೂಪುಗೊಳ್ಳಲು ಕರೆ ನೀಡಿದರು.
ಪೂರ್ವಪರೀಕ್ಷೆ, ಸಾಪಲ್ಯಪರೀಕ್ಷೆ, ಮತ್ತು ಘಟಕ ಪರೀಕ್ಷೆಗಳ ಅಂಕಗಳು, ಸಂಕಲನಾತ್ಮಕ ಮತ್ತು ರೂಪಣಾತ್ಮಕ ಪರೀಕ್ಷೆಗಳ ಅಂಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಲಾಯಿತು. ವಿದ್ಯಾರ್ಥಿಗಳು ಈಗ ಗಳಿಸಿರುವ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಲು ಯಾವ ರೀತಿ ತೊಡಗಿಸಿಕೊಳ್ಳಬೇಕೆಂದು ಮನವರಿಕೆ ಮಾಡಲಾಯಿತು. ಪರೀಕ್ಷಾ ಮಂಡಳಿ ನಿಗದಿಪಡಿಸಿರುವ ಶೇ ೭೫ ರಷ್ಟು ಹಾಜರಾತಿ ಕಡ್ಡಾಯವಾಗಿರುವ ಬಗ್ಗೆ ಮತ್ತು ಗೈರು ಹಾಜರಿ ವಿದ್ಯಾರ್ಥಿಗಳಿಗೆ ಅನೇಕ ಸಲಹೆ ಸೂಚನೆಯನ್ನು ನೀಡಿ ಇನ್ನು ಮುಂದೆ ಶಾಲೆಗೆ ನಿತಂತರವಾಗಿ ಹಾಜರಾಗಿ ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಪೋಷಕರೊಟ್ಟಿಗೆ ತಿಳಿಸಲಾಯಿತು.
ಎಸ್.ಎಸ್.ಎಲ್.ಸಿ ಮಹತ್ವ, ಎಸ್.ಎಸ್.ಎಲ್.ಸಿ ನಂತರ ವೃತ್ತಿಪರ ತರಬೇತಿ ಅವಕಾಶಗಳ ಬಗ್ಗೆ ವಿವರಿಸಿದ ಶ್ರೀಯುತರು ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪೋಷಕರೊಂದಿಗೆ ಮಾಹಿತಿ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ದತ್ತು ಯೋಜನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಸ್ಥೆ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಿ.ವೆಂಕಟೇಶಪ್ಪ, ಪದಾಧಿಕಾರಿಗಳು, ಆಡಳಿತಾಧಿಕಾರಿಗಳು ಮುಖ್ಯೋಪಾಧ್ಯಾಯರು, ಶಿಕ್ಷಕರು, ಉಪಸ್ಥಿತರಿದ್ದರು. ರಚನಾತಂಡ ಪ್ರಾರ್ಥಿಸಿದರು.ಶಿಕ್ಷಕರಾದ ಎಂ.ಪಾಪಣ್ಣ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.