ಸೆ.೧; ಕೆಮ್ಮಾಯಿ ಮೊಸರು ಕುಡಿಕೆ ಉತ್ಸವ
ಪುತ್ತೂರು: ಕೆಮ್ಮಾಯಿ ವಿಷ್ಣು ಯುವಕ ಮಂಡಲ, ಮೊಸರು ಕುಡಿಕೆ ಉತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ೭ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.೧ರಂದು ಕೆಮ್ಮಾಯಿ ಓಂ ಅಶ್ವತ್ಥಕಟ್ಟೆ ವಠಾರದಲ್ಲಿ ವಿವಿಧ ಆಟೋಟ ಸ್ಪರ್ಧೆ ಹಾಗೂ ಶೋಭಾಯಾತ್ರೆಯ ಮೂಲಕ ನಡೆಯಲಿದೆ ಎಂದು ಗೌರವಾಧ್ಯಕ್ಷ ಸುಂದರ ಪೂಜಾರಿ ಬಡಾವು ಹೇಳಿದರು.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೬ ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ಮೇಲ್ಪಟ್ಟವರಿಗೆ ಭಕ್ತಿಗೀತೆ, ಹುಡುಗರಿಗೆ ಗೋಣಿಚೀಲ ಓಟ, ಗುಡ್ಡಗಾದು ಓಟ, ಮೂರುಕಾಲಿನ ಓಟ, ಹುಡುಗಿಯರಿಗೆ ಲಿಂಬೆಹುಳಿ ಓಟ, ಬಾಟಲಿಗೆ ನೀರು ತುಂಬಿಸುವುದು, ಬೆಲೂನ್ ಊದುವ ಸ್ಪರ್ಧೆ ನಡೆಯಲಿದೆ. ಪುರುಷರಿಗೆ ಗುಂಡೆಸತ, ಮಡಕೆ ಒಡೆಯುವುದು, ಗೋಣಿಚೀಲ ಓಟ, ಅಡ್ಡಕಂಬ, ಮಹಿಳೆಯರಿಗೆ ಗುಂಡೆಸೆತ, ಸಂಗೀತಕುರ್ಚಿ, ಮಡಕೆ ಒಡೆಯುವುದು, ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಾಯಂಕಾಲ ೫ ಗಂಟೆಗೆ ಮಹಾವಿಷ್ಣುಪೂರ್ತಿ ದೇವಸ್ಥಾನದಿಂದ ಹೊರಟು, ಕೆಮ್ಮಾಯಿ, ಕೃಷ್ಣನಗರ, ಕೇಪುಳು, ಪಡೀಲು, ಕೆಮ್ಮಾಯಿ ಮೂಲಕ ಶೋಭಾಯತ್ರೆ ನಡೆಯಲಿದ್ದು, ಅಟ್ಟಿಮಡಿಕೆ ಸ್ಪರ್ಧೆ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಬೆಳಗ್ಗೆ ೯.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಚಿದಾನಂದ ರೈ ಎಸ್. ವಹಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಸೇರಿ ಗಣ್ಯರು ಭಾಗವಹಿಸಲಿದ್ದಾರೆ. ಶೋಭಾ ಯಾತ್ರೆಯನ್ನು ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ನಡೆಸಲಿದ್ದಾರೆ. ರಾತ್ರಿ ೮ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದು, ಬಹುಮಾನ ವಿತರಣೆಯನ್ನು ಸಂಸದ ಬ್ರಿಜೇಶ್ ಚೌಟ ನಡೆಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಂ., ಕೋಶಾಧಿಕಾರಿ ದಯಾನಂದ ಗೌಡ ಕೆಮ್ಮಾಯಿ, ಉಪಾಧ್ಯಕ್ಷ ಸುರೇಂದ್ರ ಪೂಜಾರಿ ಬಡಾವು, ಕ್ರೀಡಾ ಕಾರ್ಯದರ್ಶಿ ಯಶವಂತ ಹೊಸವಕ್ಲು, ಕಾರ್ಯಾಧ್ಯಕ್ಷ ಪ್ರಶಾಂತ ಬೋವುದಕಾಡು ಉಪಸ್ಥಿತರಿದ್ದರು.