ಹೆಚ್ಚುವರಿ ಚಾಲಕ-ನಿರ್ವಾಹಕರನ್ನು ನೇಮಿಸಿ- ಸಾರಿಗೆ ಸಚಿವರಿಗೆ ಅಸೋಕ್ ರೈ ಮನವಿ
ಪುತ್ತೂರು: ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಚಾಲಕ ನಿರ್ವಾಹಕರ ಕೊರತೆ ಇದ್ದು ಸರ್ಕಾರ ಹೆಚ್ಚುವರಿಯಾಗಿ ಚಾಲಕ-ನಿರ್ವಾಹಕರನ್ನು ನೇಮಕ ಮಾಡುವಂತೆ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ ಶಾಸಕ ಅಶೋಕ್ ರೈ ಅವರು ಮನವಿ ಸಲ್ಲಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಪುತ್ತೂರು ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಬಸ್ ಸಂಚಾರ ಹೆಚ್ಚುವರಿಯಾಗಿ ವ್ಯವಸ್ಥೆ ಮಾಡುವಲ್ಲಿ ಚಾಲಕ-ನಿರ್ವಾಹಕರ ಕೊರತೆ ಇದೆ. ಬಸ್ ಇದ್ದರೂ ಚಾಲಕರ ಕೊರತೆಯಿಂದ ಗ್ರಾಮೀಣ ಭಾಗಕ್ಕೆ ಬಸ್ ಓಡಾಟ ನಡೆಸಲು ಅಸಾಧ್ಯವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಚಾಲಕ-ನಿರ್ವಾಹಕರನ್ನು ನೇಮಿಸುವಂತೆ ಸಚಿವರಲ್ಲಿ ಮನವಿ ಸಲ್ಲಿಸಿದ್ದಾರೆ.
ಅಂತರರಾಜ್ಯ ಬಸ್ ಸಂಚಾರಕ್ಕೆ ಮನವಿ
ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಗೆ ಪುತ್ತೂರಿನಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭ ಮಾಡಲು ಇಲಾಖೆಯಿಂದ ಅನುಮತಿ ನೀಡುವಂತೆಯೂ ಸಚಿವರಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಗ್ಯಾರಂಟಿಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಡಿ, ಪಕ್ಷದ ಮುಖಂಡರಾದ ಮುರಳೀಧರ್ ರೈ ಮಠಂತಬೆಟ್ಟು, ರೋಶನ್ ರೈ ಬನ್ನೂರು, ಪ್ರಮೋದ್ ಕೆ ಎಸ್ ಕೊಳ್ತಿಗೆ ಉಪಸ್ಥಿತರಿದ್ದರು.