ಅಣ್ಣ – ತಂಗಿಯ ಬಂಧ ಸಾರ್ವಕಾಲೀಕವಾದುದು…..
ಸಂಬಂಧಗಳು ಒಬ್ಬ ವ್ಯಕ್ತಿಯ ಜೀವನದಲ್ಲಿ ಹಲವಾರು ಹಂತಗಳಲ್ಲಿ ವಿವಿಧ ಸ್ಥಾನಗಳಲ್ಲಿ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುತ್ತದೆ. ತಂದೆ, ತಾಯಿ, ಮಗ, ಮಗಳು, ಅಣ್ಣ, ತಮ್ಮ, ಅಕ್ಕ, ತಂಗಿ, ಸ್ನೇಹಿತ, ಸ್ನೇಹಿತೆ ಹೀಗೆ ಹಲವಾರು ಪಾತ್ರಗಳಲ್ಲಿ ವ್ಯಕ್ತಿಯ ಸಂಬಂಧಗಳನ್ನು ಕಾಣಬಹುದು. ಈ ಸಂಬಂಧಗಳು ವ್ಯಕ್ತಿಯ ಜೀವನದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಈ ಸಂಬಂಧಗಳು ಭಾವನಾತ್ಮಕ ಬಂಧದಿಂದ ಕೂಡಿರುತ್ತದೆ. ಅಣ್ಣ ತಂಗಿಯ ಬಂಧ :ಅಣ್ಣ- ತಂಗಿ ಸಂಬಂಧ ಭಾವನಾತ್ಮಕ ಹಾಗೂ ರಕ್ಷಣಾತ್ಮಕ ಸ್ನೇಹ ಬಂಧವನ್ನು ಸೂಚಿಸುತ್ತದೆ. ಅಣ್ಣನು ತಂಗಿಯ ಬೆಳವಣಿಗೆಗೆ ಅವಳ ರಕ್ಷಕ ನಾಗಿ, ಸಂತೋಷಕ್ಕೆ, ಭಾವನೆಗಳಿಗೆ ಸದಾ ಮಿಡಿಯುವ ಜೀವವಾಗಿರುತ್ತಾನೆ.ಅಣ್ಣನು ತಂಗಿಯ ಜೀವನದಲ್ಲಿ ವಿವಿಧ ಸ್ಥಾನಗಳನ್ನು ತುಂಬುತ್ತಾನೆ. ಅಣ್ಣನಾಗಿ, ಸ್ನೇಹಿತನಾಗಿ, ಮಾರ್ಗದರ್ಶಕನಾಗಿ, ಸದಾ ಹಿತೈಷಿಯಾಗಿ, ತಂದೆಯ ಸ್ಥಾನವನ್ನು ತುಂಬುವ ಭಾವನಾತ್ಮಕ ಜೀವವಾಗಿರುತ್ತಾನೆ. ತಂಗಿಯ ಬಾಲ್ಯ ಜೀವನದಿಂದ ಹಿಡಿದು ಅವಳ ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮುಂದಿನ ಜೀವನದುದ್ದಕ್ಕೂ ಅಣ್ಣನಾದವನು ಅವಳ ಉತ್ತಮ ಜೀವನದ ರೂಪನೆಯ ಜವಾಬ್ದಾರಿ ಮತ್ತು ಕರ್ತವ್ಯವನ್ನು ನಿರ್ವಹಿಸಬೇಕು ನಿರ್ವಹಿಸುತ್ತಾನೆ. ಅವಳ ಬಾಲ್ಯದಲ್ಲಿ ಉತ್ತಮ ಸ್ನೇಹಿತನಾಗಿ, ಆಟ-ಪಾಠ, ಚಟುವಟಿಕೆಯಲ್ಲಿ ಬಾಲ್ಯದ ಸ್ನೇಹಿತನಾಗಿ ಜೀವನದಲ್ಲಿ ಪಾತ್ರ ವಹಿಸುತ್ತಾನೆ. ವಿದ್ಯಾಭ್ಯಾಸದಲ್ಲಿ, ಅವಳ ಮುಂದಿನ ಉದ್ಯೋಗದಲ್ಲಿ, ವಿವಾಹದಲ್ಲಿ, ನಂತರದ ಮುಂದಿನ ಜೀವನದಲ್ಲಿ ಶಕ್ತಿಯಾಗಿರುತ್ತಾನೆ.ಅಣ್ಣ ಮತ್ತು ತಂಗಿಯ ಸಂಬಂಧವೆಂದರೆ ಅದು ಅಪ್ಪ ಮಗಳ ಸಂಬಂಧವಿದ್ದಂತೆ, ತಂಗಿಗೆ ಸಣ್ಣ ಜ್ವರ ಬಂದರೂ ಚಡಪಡಿಸುವ ಅಣ್ಣ, ಸದಾ ಅಣ್ಣನ ಏಳಿಗೆಯನ್ನು ಬಯಸುವ ತಂಗಿ – ಇದೊಂದು ಅಪರೂಪದ ಅವಿನಾಬಾವ ಸಂಬಂಧ. ಪ್ರತಿಯೊಬ್ಬ ತಂಗಿಗೆ ಅಣ್ಣ ಹೇಳುವ ಮಾತು ಕೇವಲ ಮಾತಲ್ಲ, ಅದು ಆದರ್ಶವಾದುದು. ಅದು ಭರವಸೆಯ  ಸಂಬಂಧವನ್ನು ಕೊಂಡೋಯ್ಯುವ ಮೆಟ್ಟಿಲು. ಹಾಗೆಯೇ ತಂಗಿ ಹೇಳುವ ಮಾತು ಅದು ಕೇವಲ ಮಾತಲ್ಲ,  ನಡೆದುಕೊಳ್ಳುವ ಪ್ರತಿಷ್ಟೆ . ತಂಗಿ ಯಾರ ಮುಂದೆಯೂ ಹೇಳಲಾಗದ ತನ್ನ ನೋವನ್ನು ಅಣ್ಣನ ಮುಂದೆ ಹೇಳಿಕೊಳ್ಳುವಳು.ಯಾಕೆಂದರೆ, ಬೇರೆ ಯಾವ ಸಂಬಂಧವೂ ನೀಡದ ಭರವಸೆ ಸಹೋದರತ್ವ ನೀಡುವುದು. ಅಣ್ಣನ ಪ್ರೀತಿ ಶಾಶ್ವತವಾದುದು.ತಂದೆ ತಾಯಿಯನ್ನು ಬಿಟ್ಟು ನಮ್ಮನ್ನು ಈ ಪ್ರಪಂಚದಲ್ಲಿ ಹೆಚ್ಚು ಪ್ರೀತಿಸುವ ಜೀವವೆಂದರೆ ಅದು ತಂಗಿ ಹಾಗೂ ಅಣ್ಣ, ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಕುಟುಂಬದ ಬಗ್ಗೆ ಹೆಮ್ಮೆ ಇರುತ್ತದೆ. ಅದರಲ್ಲೂ ಒಡಹುಟ್ಟಿದವರ ನಡುವೆ ಇರುವ ಪ್ರೀತಿ-ಆತ್ಮೀಯತೆ ಬಹಳ ಹೆಚ್ಚು. ಇಂತಹ ಒಂದು ಅಪರೂಪದ ಅನುಬಂಧವೇ ಅಣ್ಣ-ತಂಗಿ ಸಂಬಂಧ. ಬಾಲ್ಯದಲ್ಲಿ ಅಣ್ಣ ಮತ್ತು ತಂಗಿಯ ಕಿತ್ತಾಟವನ್ನು ಕಂಡ ಪೋಷಕರಿಗೆ ಇವರೆಂತ ಅಣ್ಣ-ತಂಗಿ ಎನಿಸುವುದು, ಆದರೆ ಬರುಬರುತ್ತಾ ಕಡಿಮೆಯಾಗುವ ಈ ಕಿತ್ತಾಟಗಳು, ಅಣ್ಣ-ತಂಗಿಯ ಬಾಂದವ್ಯದ ಆದರ್ಶಗಳು ಅವರಿಬ್ಬರಿಗೂ ಅರಿವು ಮಾಡಿಸುತ್ತದೆ. ಇಷ್ಟೊಂದು ಭಾವನೆಗಳನ್ನು ಹೊಂದಿರುವ ಅಣ್ಣ ತಂಗಿಯ ಭಾಂದವ್ಯ ತುಂಬಾ ಪವಿತ್ರವಾದದು, ಶೇಷ್ಟವಾದುದು. ಜೀವನದ ಜಂಜಾಟದಲ್ಲಿ ಆ ಬಾಂಧವ್ಯ ಮರೆಯದಿರಿ, ಜೊತೆಗೆ ಈ ಬಂಧ ಮರೆಯಾಗದಿರಲಿ. ಅಣ್ಣನಿಗೆ ತಂಗಿ ಬೆಲೆಕಟ್ಟಲಾಗದ ಒಂದು ಶಾಶ್ವತ ಉಡುಗೊರೆ, ತಂಗಿಗೆ ಅಣ್ಣ ಬೆಲೆಕಟ್ಟಲಾಗದ ಒಂದು ಶಾಶ್ವತ ಉಡುಗೊರೆ.
ಶಿವಕುಮಾರ ಎನ್ ಜಿ
ಬೆಳ್ಳೂಡಿ
ದಾವಣಗೆರೆ ಜಿಲ್ಲೆ