ಮಕ್ಕಳೇ ದೇಶದ ಮುಂದಿನ ಶಕ್ತಿ;

ಸಂಜೆವಾಣಿ ವಾರ್ತೆ
ದಾವಣಗೆರೆ ಆ ೩೦;೮ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ವಿದ್ಯಾರ್ಥಿಗಳು ಚೆನ್ನಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಇದು ಮುಂದೆ ತಾವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ಸಹಾಯಕವಾಗುತ್ತದೆ. ಮಕ್ಕಳು ಶೈಕ್ಷಣಿಕವಾಗಿ ಚೆನ್ನಾಗಿ ಬೆಳೆಯಬೇಕು ಏಕೆಂದರೆ ಮಕ್ಕಳೇ ಮುಂದಿನ ದೇಶದ ಶಕ್ತಿ ಎಂದು ರೋಟರಿ ಇಂಡಿಯನ್ ಮಿಷನ್ ನ ಜಿಲ್ಲಾ ಅಧ್ಯಕ್ಷರಾದ ರೊ. ವಿಶ್ವಜೀತ್ ಜಾದವ್  ತಿಳಿಸಿದರು.ಅವರು ಕುರ್ಕಿ ಸರ್ಕಾರಿ ಪ್ರೌಢಶಾಲೆ ಯಲ್ಲಿ  ದಾವಣಗೆರೆ ವಿದ್ಯಾನಗರ ರೋಟರಿ ಸಂಸ್ಥೆ ಹಾಗೂ ಸರ್ಕಾರಿ ಪ್ರೌಢಶಾಲೆ, ಕುರ್ಕಿ ಇವರುಗಳ ಸಹಯೋಗದಲ್ಲಿ ಏರ್ಪಡಿಸಿದ ಎಸ್ ಎಸ್ ಎಲ್ ಸಿ ಮಕ್ಕಳಿಗೆ  *ವಿದ್ಯಾರ್ಥಿ ಮಿತ್ರ ಪತ್ರಿಕೆಯ ಉಚಿತ ವಿತರಣೆ* ಹಾಗೂ ರೊ. ಕುರ್ಕಿ ಕೆ ಜಿ ವೇದಮೂರ್ತಿ ಗೌಡ್ರು 8 ಮತ್ತು 9 ನೆ ತರಗತಿ ವಿಧಾರ್ಥಿಗಳಿಗೆ *ಕನ್ನಡ ರತ್ನಕೋಶ* ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪೋಲಿಯೋ ಲಸಿಕೆಯನ್ನು ಇಡೀ ವಿಶ್ವಕ್ಕೆ ಕೊಡುಗೆಯಾಗಿ ನೀಡುವುದು ಅಂತರಾಷ್ಟ್ರೀಯ ರೋಟರಿ ಸಂಸ್ಥೆಯಾಗಿದೆ. ಹಾಗೂ ಲಿಟ್ರಸಿ ಕಾರ್ಯಕ್ರಮದ ಮೂಲಕ ಸಮುದಾಯದ ಮಕ್ಕಳಿಗೆ,ಯುವಕರಿಗೆ, ವಯಸ್ಕರಿಗೆ ವಿವಿಧ ರೀತಿಯಲ್ಲಿ ಶಿಕ್ಷಣವನ್ನು ಕೊಡುವ ಮೂಲಕ ಶೈಕ್ಷಣಿಕ ಸೇವೆಯನ್ನು ರೋಟರಿ ಸಂಸ್ಥೆಯ ವತಿಯಿಂದ  ಮಾಡಲಾಗುತ್ತಿದೆ ಎಂದು ತಿಳಿಸಿದರು.ದಾವಣಗೆರೆ ವಿದ್ಯಾನಗರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಎಂ ಎನ್ ಮಳವಳ್ಳಿ  ಯವರು ಮಾತನಾಡುತ್ತಾ ಜಗತ್ತಿನಲ್ಲಿ ನಂಬರ್ ಒನ್ ಅಂತರಾಷ್ಟ್ರೀಯ ಸರ್ಕಾರೇತರ ಸೇವಾ ಸಂಸ್ಥೆ ರೋಟರಿ ಸಂಸ್ಥೆಯಾಗಿದೆ. ಸಮಾಜ ನಮಗೆ ಸಾಕಷ್ಟು ಕೊಟ್ಟಿದೆ ಅದರಲ್ಲಿ ಸ್ವಲ್ಪ ಭಾಗವನ್ನು ನಾವು ಸಮಾಜಕ್ಕೆ ಅರ್ಪಿಸುತ್ತಿದ್ದೇವೆ. ನಮ್ಮ ಆದಾಯದಲ್ಲಿ ಸಣ್ಣ ಉಳಿತಾಯವನ್ನು ಹೀಗೆ ಸಮಾಜದ ಬೇರೆ ಬೇರೆ ಸೇವಾ ಕಾರ್ಯಗಳಿಗೆ ಉಪಯೋಗಿಸಿದರೆ ಸಾರ್ಥಕವಾಗುತ್ತದೆಂಬ ಭಾವನೆ ನಮ್ಮದು. ಹಾಗೆ ಲಕ್ಷಾಂತರ ದಾನಿಗಳು ಕೂಡ ಮಾಡುವ ದಾನವನ್ನು ರೋಟರಿ ಸಂಸ್ಥೆ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಶೈಕ್ಷಣಿಕ  ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಂಡು ಸೇವ ಕಾರ್ಯ ಮಾಡುತ್ತಿದೆ. ವಿಜಯವಾಣಿ ಪತ್ರಿಕೆಯವರು ಹೊರತರುತ್ತಿರುವ ವಿದ್ಯಾರ್ಥಿ ಮಿತ್ರ ಇದು ಉದ್ಯೋಗ ಮಿತ್ರವೂ ಕೂಡ ಹಾಗಿದೆ ಮೊಬೈಲ್ ಮೇಲೆ ಬೆರಳಾಡಿಸುವುದನ್ನು ಬಿಟ್ಟರೆ ಮಕ್ಕಳು ಹೆಚ್ಚು ಜಾಣರಾಗಬಹುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ರೊ. ಕುರ್ಕಿ ಕೆ ಜಿ ವೇದಮೂರ್ತಿ ಗೌಡ್ರು 8 ಮತ್ತು 9ನೇ ತರಗತಿಯ ಮಕ್ಕಳಿಗೆ ಕನ್ನಡ ರತ್ನಕೋಶ ವನ್ನು ಉಚಿತವಾಗಿ ನೀಡಿದರು.ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಓದುವುದಕ್ಕೆ  ಬೇಕಾದ ಆರ್ಥಿಕ ಹಾಗೂ ಓದಲು ಬೇಕಾದ ಪೂರಕ ಸಹಕಾರವನ್ನು ನೀಡುತ್ತೇನೆ. ಅಂತಹ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದುತಿಳಿಸಿದರು.