“ಕ್ರೀಡೆ ಇಲ್ಲದ ಜೀವನ ಕೀಡೆ ಹತ್ತಿದ ಮರದಂತೆ” : ಪ್ರೊ. ಚನ್ನಾರಡ್ಡಿ ಪಾಟೀಲ
ಕಲಬುರಗಿ:ಆ.29:ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಕಲಬುರಗಿಯಲ್ಲಿ “ರಾಷ್ಟ್ರೀಯ ಕ್ರೀಡಾ ದಿನಾಚರಣೆ”ಯನ್ನು ಆಚರಿಸಲಾಯಿತು. ಮೇಜರ್ ಧ್ಯಾನಚಂದ್ ಖ್ಯಾತ ಹಾಕಿ ಆಟಗಾರರು ಇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಕಾಲೇಜಿನ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, “ವಿದ್ಯಾರ್ಥಿಗಳು ಉತ್ತಮವಾದ ಆರೋಗ್ಯವನ್ನು ಪಡೆಯಲು ವಿವಿಧ ಆಟಗಳಲ್ಲಿ ತೊಡಗಿಸಿ ಕೊಳ್ಳಬೇಕು, ಕ್ರೀಡೆ ಇಲ್ಲದ ಜೀವನ ಕೀಡೆ ಹತ್ತಿದ ಮರದಂತೆ ಎಂದರು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಅವರು ಭಾರತಕ್ಕೆ ಒಲಂಪಿಕ್ಸ್‍ನಲ್ಲಿ ಸತತ ಮೂರು ಬಾರಿ ಹ್ಯಾಟ್ರಿಕ್ ಬಂಗಾರದ ಪದಕ ತಂದುಕೊಟ್ಟರು. ಭಾರತ ದೇಶಕ್ಕಾಗಿ ಅವರಲ್ಲಿದ್ದ ತುಡಿತ, ಕ್ರೀಡೆಯಲ್ಲಿಯ ಅರ್ಪಣಾ ಮನೋಭಾವ, ಪ್ರಾಮಾಣಿಕತೆ ಇವುಗಳಿಂದ ಹಾಕಿಯಲ್ಲಿ ಭಾರತದ ಹೆಸರನ್ನು ವಿಶ್ವದ ತುಂಬ ಪಸರಿಸಿದರು. ಬಡತನದಲ್ಲಿದ್ದುಕೊಂಡು ಯಾವುದೇ ಆಟದ ಪರಿಕರಗಳಿಲ್ಲದೇ ಪರಿಶ್ರಮದಿಂದ ಆಡಿ ಸಾಧನೆ ಮಾಡಿದರು. ಕೇಂದ್ರ ಸರ್ಕಾರ 1956 ರಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 1936 ರಲ್ಲಿ ಜರ್ಮನ್ ದೇಶದ ಬರ್ಲಿನ್‍ನಲ್ಲಿ ನಡೆದ ಒಲಂಪಿಕ್ ಕ್ರೀಡೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಹಾಕಿ ಕ್ರೀಡಾಪಟುವಾದ ಶ್ರೀ ಧ್ಯಾನಚಂದ್ ಅವರು 4 ಗೋಲು ಹೊಡೆದು ಜಯಗಳಿಸಿದರು. ಅವರ ಹಾಕಿ ಆಟದ ಕೌಶಲ್ಯವನ್ನು ಕಂಡು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಶ್ರೀ ಧ್ಯಾನಚಂದ್ ಅವರನ್ನು ತಮ್ಮ ಜರ್ಮನ್ ದೇಶವನ್ನು ಪ್ರತಿನಿಧಿಸಲು ಹಾಗೂ ಜನರಲ್ ಹುದ್ದೆಯ ಆಹ್ವಾನ ಕೊಟ್ಟರು. ಆಗ ಶ್ರೀ ಧ್ಯಾನಚಂದ ಅವರು ಭಾರತ ಮಾತೆ ನನಗೆ ಏನೆಲ್ಲ ಕೊಟ್ಟಿದೆ. ನಾನು ಕೇವಲ ನನ್ನ ಭಾರತ ದೇಶಕ್ಕಾಗಿ ಆಡುತ್ತೇನೆಂದು ತಿಳಿಸಿದರು. ವಿದ್ಯಾರ್ಥಿಗಳು ಯಾವುದಾದರೂ ಒಂದು ಆಟವನ್ನು ಸತತವಾಗಿ ಆಡುತ್ತ ಇದ್ದರೆ ಉತ್ತಮ ಆರೋಗ್ಯದ ಜೊತೆಗೆ ದಿನನಿತ್ಯದ ಸವಾಲುಗಳನ್ನು ಎದುರಿಸುವ ಮನೋಬಲ ಬರುತ್ತದೆ ಎಂದರು.
ಇದೇ ಸಂದರ್ಬದಲ್ಲಿ ಸರ್ವಜ್ಞ ಶಿಕ್ಷಣ ಸಂಸ್ಥೆಯ ದೈಹಿಕ ನಿರ್ದೇಶಕರಾದ ಶ್ರೀ ಗುರುರಾಜ ಜಾನ್‍ಬೋ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಪ್ರಶಾಂತ ಕುಲಕರ್ಣಿ, ಶ್ರೀ ಕರುಣೇಶ ಬಿ. ಹಿರೇಮಠ, ಶ್ರೀ ಗುರುರಾಜ ಕುಲಕರ್ಣಿ, ದೈಹಿಕ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ವೀರಶ್ರೀ ಪ್ರಾರ್ಥಿಸಿದಳು. ಶ್ರೀ ಚಂದ್ರಕಾಂತ ಎಸ್. ನಿರೂಪಿಸಿದರು.