ಕಾಣೆಯಾದ ಮಹಿಳೆ ಮೂರು ವರ್ಷಗಳ ನಂತರ ಹೈದರಬಾದ್‍ನಲ್ಲಿ ಪತ್ತೆ
ಕಲಬುರಗಿ,ಆ.29-ಮೂರು ವರ್ಷಗಳ ಹಿಂದೆ ಕಲಬುರಗಿಯಿಂದ ಕಾಣೆಯಾದ ಮಹಿಳೆಯೊಬ್ಬರನ್ನು ಹೈದರಾಬಾದ್ ನಗರದಲ್ಲಿ ಪತ್ತೆ ಹಚ್ಚುವಲ್ಲಿ ಸಿಸಿಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ನಯಾ ಮೊಹಲ್ಲಾ ಹಜ್ ಕಮಿಟಿ ನಿವಾಸಿಯೊಬ್ಬರು ಪತ್ನಿ ಕಾಣೆಯಾದ ಬಗ್ಗೆ 8.2.2021 ರಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಮಹಿಳಾ ಪೊಲೀಸರು ತನಿಖೆ ನಡೆಸಿದ್ದರೂ ಮಹಿಳೆ ಪತ್ತೆಯಾಗಿರಲಿಲ್ಲ. 3 ವರ್ಷ 6 ತಿಂಗಳ ನಂತರವೂ ಕಾಣೆಯಾದ ಮಹಿಳೆ ಪತ್ತೆಯಾಗದೇ ಇರುವುದರಿಂದ ಪೊಲೀಸ್ ಆಯುಕ್ತರು ಪ್ರಕರಣದ ತನಿಖೆಯನ್ನು ಸಿಸಿಬಿ ಘಟಕಕ್ಕೆ ವಹಿಸಿದ್ದರು. ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಸಿಸಿಬಿ ಘಟಕದ ಸಹಾಯಕ ಪೊಲೀಸ್ ಆಯುಕ್ತ ಸಂತೋಷ ಬನ್ನಟ್ಟಿ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪಿಐ ದಿಲೀಪ ಬಿ.ಸಾಗರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರೀತಮ್, ಸುನೀಲಕುಮಾರ, ನಾಗರಾಜ, ಮಹಿಬೂಬ್‍ಸಾಬ್ ಅವರು ತನಿಖೆ ಕೈಗೊಂಡು ದೆಹಲಿ, ಹರಿಯಾಣ, ಜೈಪೂರ ನಗರಗಳಲ್ಲಿ ಕಾಣೆಯಾದ ಮಹಿಳೆಯ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. ಕೆಲ ದಿನಗಳ ಹಿಂದೆ ಮಹಿಳೆ ದೆಹಲಿಯಿಂದ ಹೈದರಬಾದ್‍ಗೆ ಹೋಗಿ ನೆಲೆಸಿದ್ದಾರೆ ಎಂಬ ನಿಖರ ಮಾಹಿತಿ ಮೇಲೆ ಪೊಲೀಸರ ತಂಡ ಹೈದರಾಬಾದಗೆ ತೆರಳಿ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಮೂರುವರೆ ವರ್ಷಗಳ ನಂತರ ಕಾಣೆಯಾದ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.