ಕನ್ನಡದಲ್ಲಿ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ. ಅದರಲ್ಲಿ ಇತಿಹಾಸ ಕೂಡ ಇದೆ
ಕಲಬುರಗಿ:ಆ.29: ಕನ್ನಡ ನಾಡು-ನುಡಿಯ ಸಾಹಿತ್ಯ ಸಂಭ್ರಮದ ಕಲಬುರಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗುರುವಾರ ನಗರದ ಕನ್ನಡ ಭವನದಲ್ಲಿ ಅದ್ಧೂರಿಯಾಗಿ ಚಾಲನೆ ದೊರಕಿತು.
ಆರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಅವರಿಂದ ಧ್ವಜಾರೋಹಣ ನೆರವೇರಿತು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಿನೋದ ಪಾಟೀಲ ಸರಡಗಿ, ಕಾರ್ಯಾಧ್ಯಕ್ಷ ರಾಘವೇಂದ್ರ ಕಲ್ಯಾಣಕರ್, ಸಮ್ಮೇಳನಾಧ್ಯಕ್ಷೆ ಪ್ರಮೀಳಾ ಜಾನಪ್ಪಗೌಡ ಉಪಸ್ಥಿತರಿದ್ದರು. ಭಾರತ ಸೇವಾ ದಳದ ಚನ್ನಬಸಪ್ಪ ಸಜ್ಜನ್ ಹಾಗೂ ಶಿವಲಿಂಗಪ್ಪ ಗೌಳಿ ಕಾರ್ಯಕ್ರಮ ನಡೆಸಿಕೊಟ್ಟರು.
ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ತಾಲೂಕಾ ಘಟಕದ ವಿಶಾಲಾಕ್ಷಿ ಮಾಯಣ್ಣವರ್, ವಿಶ್ವನಾಥ ಯನಗುಂಟಿ, ಕುಪೇಂದ್ರ ಬರಗಾಲಿ, ಶರಣು ಹಾಗರಗುಂಡಗಿ, ರೇವಯ್ಯಾ ಸ್ವಾಮಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಪ್ರಭವ ಪಟ್ಟಣಕರ್, ಭಾಗ್ಯಶ್ರೀ ಮರಗೋಳ, ಕವಿತಾ ಕವಳೆ, ಸುನೀತಾ ಮಾಳಗಿ, ವಿಜಯಕುಮಾರ ಹಾಬನೂರ, ರೇವಣಸಿದ್ದಪ್ಪ ಗುಂಡಗುರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಮ್ಮೇಳನದ ಸರ್ವಾಧ್ಯಕ್ಷೆ ಪ್ರಮೀಳಾ ಜಾನಪ್ಪಗೌಡ ಮಾತನಾಡಿ, ಕನ್ನಡದಲ್ಲಿ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ. ಅದರಲ್ಲಿ ಇತಿಹಾಸ ಕೂಡ ಇದೆ ಎಂದು ಹೇಳಿದರು.
ಕನ್ನಡ ಭಾಷೆಯನ್ನು ಒತ್ತಾಯಪೂರ್ವಕವಾಗಿ ಕಲಿಸದೆ ಪ್ರೀತಿಯಿಂದ ಕಲಿಸಬೇಕು. ಕನ್ನಡ ಬಳಸಿದಾಗ ಮಾತ್ರ ಭಾಷೆ ಬೆಳೆಯುತ್ತದೆ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ನೀತಿಯ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಇಂದು ಕೇವಲ ಕನ್ನಡ ಭಾಷೆ ಮೇಲೆ ಆಗುವ ದಾಳಿಯಲ್ಲ. ಬದಲಿಗೆ ನಮ್ಮ ಭವ್ಯ ಪರಂಪರೆ, ಜೀವನ ಶೈಲಿ, ಸಂಸ್ಕøತಿ, ಆಹಾರ ಪದ್ಧತಿಗಳ ಮೇಲೆ ಆದ ದಾಳಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಮಾಜದಲ್ಲಿ ಪ್ರೀತಿ, ಹೃದಯವಂತಿಕೆ ಬೆಳೆಸಬೇಕಾದರೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ನಾನು ಕುಟುಂಬ ವಿಶ್ವವಿದ್ಯಾಲಯದಲ್ಲಿ ಬೆಳೆದಿರುವುದರಿಂದ ಒಲಿದಂತೆ ಹಾಡಿರುವೆ. ನನಗೆ ಮನೆಯೇ ಮೊದಲ ಪಾಠಶಾಲೆ. ಜನನಿಯೇ ಮೊದಲ ಗುರುವಾಗಿದ್ದಾರೆ ಎಂದರು.
ಸಮ್ಮೇಳನದ ಅಂಗವಾಗಿ ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಸಂಪಾದಕತ್ವದ ಹೊನ್ನುಸಿರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕಲಬುರಗಿ ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಸ್ಮರಣ ಸಂಚಿಕೆಗಳು ಐತಿಹಾಸಿಕ ದಾಖಲೆಗಳಾಗುತ್ತವೆ. ಈ ಭಾಗದ ಎಲ್ಲ ಲೇಖಕರ ಬದುಕು ಹಾಗೂ ಬರಹದ ಉಸಿರು ಇದಾಗಿದೆ ಎಂದು ತಿಳಿಸಿದರು.
7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ. ನಾಗೇಂದ್ರ ಮಸೂತಿ ಮಾತನಾಡಿ, ಮನಸ್ಸು ದೊಡ್ಡದಾಗಬೇಕು. ವಾತ್ಸಲ್ಯ ತುಂಬಿದ ಸಾಹಿತ್ಯ ಮಹಿಳಾ ಸಾಹಿತ್ಯ. ಕನ್ನಡಕ್ಕಾಗಿ ಕೈ ಎತ್ತದೆ ಈಗ ಬಾಯಿ ತೆಗೆಯಬೇಕು. ಕಲ್ಯಾಣ ಕರ್ನಾಟಕದ ಲೇಖಕರನ್ನು ಪರಿಚಯಿಸುವ ಕೆಲಸ ಮತ್ತೆ ಆಗಬೇಕು ಎಂದರು. ಕಲಬುರಗಿ ಸೌಹಾರ್ದತೆಯ ನೆಲೆ. ವಚನ, ದಾಸ ಹಾಗೂ ಸೂಫಿ ಸಂತರ ನೆಲವಿದು ಎಂದು ತಿಳಿಸಿದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಶ್ರೀ ಡಾ. ಲಿಂಗರಾಜ ಅಪ್ಪಾ, ಸಾಹಿತಿಗಳನ್ನು ನೋಡಿದರೆ ಜಗತ್ತನ್ನು ನೋಡಿದಂತೆ. ನಮ್ಮ ಕನ್ನಡ ಭಾಷೆ ತವರು ಮನೆ ಇದ್ದಂತೆ. ಅದನ್ನು ಮಾತೃ ಹೃದಯದಂತೆ ಕಾಣುತ್ತೇವೆ. ಇಂದು ಯಾವುದು ವ್ಯವಹಾರಿಕ ಭಾಷೆಯಾಗಿರುತ್ತದೆಯೇ ಅಂಥ ಭಾಷೆ ಹೆಚ್ಚು ಪ್ರಭಾವವಾಗಿರುತ್ತದೆ. ಸ್ನೇಹ ಪ್ರೀತಿಯಿಂದ ಮಾತೃಭಾಷೆ ಬೆಳೆÉಸಬೇಕಾಗಿದೆ. ನಮ್ಮ ನಾಡಿನ ಭಾಷೆ ಉಸಿರಾಗಿ ಅಲವಡಿಸಿಕೊಳ್ಳಬೇಕು. ಅನ್ಯ ಭಾಷೆಗಳ ಬಗ್ಗೆ ಗೌರವ ಹೊಮದಿರಬೇಕು ಎಂದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ಕನ್ನಡದ ಮನಸ್ಸುಗಳಿಗೆ ಹಿಡಿಸುವಂಥ ಸಾಹಿತ್ಯವನ್ನು ಕೊಡುವ ಕಾರ್ಯವಾಗಬೇಕಿದೆ. ಕನ್ನಡ ಭಾಷೆಯನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸುವ ಕಾರ್ಯ ಹೆಚ್ಚಾಗಿ ಆಗಬೇಕಿದೆ. ಪರಿಷತ್ತು ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕಾರ್ಯ ಜೋರಾಗಿ ಮಾಡುತ್ತಿದ್ದೇವೆ ಎಂದ ಅವರು, ವಿಭಿನ್ನವಾಗಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಪರಿವರ್ತಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸೂಫಿ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಾಗುತ್ತಿದೆ. ಶರಣರು, ಸೂಫಿ-ಸಂತರು, ದಾಸರು, ತತ್ವಪದಕಾರರು ನಡೆದಾಡಿದ ಈ ಕಲ್ಯಾಣದ ನೆಲದಲ್ಲಿ ಇವುಗಳ ಪರಂಪರೆಯನ್ನ ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುವ ಕಾರ್ಯ ಪರಿಷತ್ತು ಮಾಡುತ್ತಿದೆ ಎಂದರು.
ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ವಿನೋದ ಪಾಟೀಲ ಸರಡಗಿ, ರಾಘವೇಂದ್ರ ಕಲ್ಯಾಣಕರ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ನಾಗೇಂದ್ರ ಮಸೂತಿ , ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಿದರು.
ನಂತರ ನಡೆದ ಸಾಹಿತ್ಯ ಚಿಂತನಾಗೋಷ್ಠಿಯಲ್ಲಿ ತಾಲೂಕಿನ ಮಹಿಳಾ ಸಾಹಿತ್ಯ ಕುರಿತು ಮಾತನಾಡಿದ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, ಮಹಿಳೆಯರು ತಮ್ಮ ಕೌಟುಂಬಿಕ ಜೀವನ ನಿರ್ವಹಣೆಯ ಜತೆಗೆ ಸಾಮಾಜಿಕ ಮತ್ತು ಸಾಂಸ್ಕøತಿಕ ಹೊಣೆಗಾರಿಕೆ ನಿಭಾಯಿಸುತ್ತಿದ್ದಾಳೆ. ಅಡುಗೆ ಮನೆಯಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾಳೆ ಎಂದು ಹೇಳಿದರು.
ಅನೇಕತೆಯಲ್ಲಿ ಏಕತೆ-ಕಲಬುರಗಿ ಕುರಿತು ಮಾತನಾಡಿದ ಮಹ್ಮದ್ ಅಯಾಜುದ್ದೀನ್ ಪಟೇಲ್, ಕಲ್ಯಾಣ ಕರ್ನಾಟಕದ ಶರನರ ನಾಡಿನಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಭಾವೈಕ್ಯತೆ ನೆಲದಲ್ಲಿ ಮಾನವೀಯ ನೆಲೆಗಟ್ಟು ಕಾಣಬಹುದಾಗಿದೆ. ಬಸವಾದಿ ಶರಣರಿಂದಲೂ ಏಕತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ ಎಂದರು.
ಸಮ್ಮೇಳನಾಧ್ಯಕ್ಷರ ಬದುಕು-ಬರಹದ ಕುರಿತು ಪ್ರೊ. ನಿಂಗಮ್ಮ ಪತಂಗೆ ಮಾತನಾಡಿ, ಬಹುಮುಖ ಪ್ರತಿಭೆಯ ಸಾಹಿತಿಯಾಗಿ ಪ್ರಮೀಳಾ ಜಾನಪ್ಪಗೌಡ ಅವರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖರಾಗಿದ್ದಾರೆ ಎಂದು ಹೇಳಿದರು. ಸಾಹಿತಿ ಈಶ್ವರ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕಾ ಘಟಕದ ನಿಕಟಪೂರ್ವ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಆಶಯ ನುಡಿಗಳನ್ನಾಡಿದರು.
ಗಮನ ಸೆಳೆದ ಕವಿಗೋಷ್ಠಿ:
ಸಾಹಿತಿ ಧರ್ಮಣ್ಣ ಎಚ್ ಧನ್ನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಥಿಯಲ್ಲಿ ಪತ್ರಕರ್ತ ಸಂಗಮನಾಥ ರೇವತಗಾಂವ ಅವರು ಆಶಯ ನುಡಿಗಳನ್ನಾಡಿದರು. ಶಿವರಾಜ ಅಂಡಗಿ, ಶರಣರಾಜ್ ಛಪ್ಪರಬಂದಿ ವೇದಿಕೆ ಮೇಲಿದ್ದರು. ಅನೇಕ ಹಿರಿಯ ಮತ್ತು ಯುವ ಕವಿಗಳು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.
ಸಮಾರೋಪ ಸಮಾರಂಭ:
ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಸಮಾರೋಪ ನುಡಿಗಳನ್ನಾಡಿ, ಪುಸ್ತಕ ಓದುವ ಸಂಸ್ಕøತಿ ಕಡಿಮೆಯಾಗುತ್ತಿರುವ ಇಂದಿನ ಕಾಲದಲ್ಲಿ ಓದುವ ಮತ್ತು ಬರೆಯುವ ಸಂಸ್ಕøತಿ ಬೆಳೆಸಬೇಕಾಗಿದೆ. ಇಂದು ಓದುವ ಅವಶ್ಯಕತೆ ಇದೆ. ಆದರೆ ಕಾಲ ಕೆಟ್ಟಿದೆ ಎಂದು ದೂರುವ ಬದಲು ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮನೆ ಮನಗಳಲ್ಲಿ ದೇಶೀಯ ಸಂಸ್ಕøತಿ ಬೆಳೆಸಬೇಕಾಗಿದೆ. ಹಾಗೂ ಸಮಾಜದಲ್ಲಿ ಬದುಕುವ ನಾವು ಜವಾಬ್ದಾರಿಯಿಂದ ಮುನ್ನಡೆಯಬೇಕಾಗಿದೆ. ದಾರಿಯಲ್ಲಿನ ಮುಳ್ಳು ತೆಗೆದು ಹಾಕುವ ಮೂಲಕ ನಾವು ಇತರ ಜೀವನ ಮಾರ್ಗ ಹಸನಾಗಿಸೋಣ ಎಂದು ಹೇಳಿದರು.
ಬಿ.ಎಸ್. ದೇಸಾಯಿ ಮಾತನಾಡಿ, ಗೃಹಿಣಿಯಾಗಿ ಸಾಹಿತ್ಯ ರಚನೆ ಮಾಡಿದ ಪ್ರಮೀಳಾ ಜಾನಪ್ಪಗೌಡ ನಾಡಿನ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಿಪಡಿಸಿದರು.
ಡಿಡಿಪಿಐ ಸೂರ್ಯಕಾಂತ ಮದಾನಿ ಮಾತನಾಡಿ,ಸಾಂಸ್ಕøತಿಕ ಚರ್ಚೆಗಳಾಗಬೇಕು. ಕಲಬುರಗಿ ನಗರದ ಬಡಾವಣೆ ಹಾಗೂ ರಸ್ತೆಗಳೋಇಗೆ ಸಾಹಿತಿಗಳ ಹೆಸರಿಡಬೇಕು. ಇದರಿಂದ ನಮ್ಮ ಮಕ್ಕಳಿಗೆ ಸಾಹಿತಿಗಳನ್ನು ಪರಿಚಯಿಸಿದಂತಾಗುವುದು. ಕಲೆ, ಸಾಹಿತ್ಯ, ಸಂಸ್ಕøತಿ ಕುರಿತು ಚರ್ಚಿಸಿದ ವಿಚಾರಗಳನ್ನು ಅನುಷ್ಠಾನಗೊಳಿಸಬೇಕು. ಪ್ರಮುಖರಾದ ಸೇವಂತಾ ಚವ್ಹಾಣ, ಭಾನುಕುಮಾರ ಗಿರೇಗೋಳ, ಬಿ.ಎಸ್. ಮಾಲಿಪಾಟೀಲ, ಪ್ರಭುಲಿಂಗ ಮೂಲಗೆ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕರಿಸಲಾಯಿತು.
ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷರಾದ ಪ್ರಮೀಳಾ ಜಾನಪ್ಪಗೌಡ ಅವರನ್ನು ಕೂರಿಸಿ ಅದ್ಧೂರಿಯಾಗಿ ವಿವಿಧ ಕಲಾ ತಂಡಗಳೊಂದಿಗೆ ಸಾಂಸ್ಕøತಿಕ ಮೆರವಣಿಗೆ ಜರುಗಿತು. ಮಕ್ಕಳ ಕೋಲಾಟ, ಲಂಬಾಣಿ ನೃತ್ಯ ಜನರ ವಿಶೇಷ ಗಮನ ಸೆಳೆಯಿತು. ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸ್ವಾಗತ ಸಮಿತಿಯ ವಿನೋದ ಪಾಟೀಲ ಸರಡಗಿ ಹಾಗೂ ಕಾರ್ಯಾಧ್ಯಕ್ಷ ರಾಘವೇಂದ್ರ ಕಲ್ಯಾಣಕರ್, ಕಲ್ಯಾಣಕುಮಾರ ಶೀಲವಂತ, ರವೀಂದ್ರಕುಮಾರ ಭಂಟನಳ್ಳಿ ಅವರುಗಳು ಕನ್ನಡ ಹಾಡುಗಳು ಹಾಗೂ ಡೊಳ್ಳಿನ ನಾದಕ್ಕೆ ನೃತ್ಯ ಮಾಡಿದ ಪ್ರಸಂಗ ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು.
ತಾಲೂಕು ಸಮ್ಮೇಳನಗಳ ಹಿಂದಿನ ಸರ್ವಾಧ್ಯಕ್ಷರುಗಳಾದ ಡಾ. ಸ್ವಾಮಿರಾವ ಕುಲಕರ್ಣಿ, ಡಾ. ಶ್ರೀನಿವಾಸ ಸಿರನೂರಕರ್, ಪ.ಮಾನು ಸಗರ, ಡಾ. ನಾಗೇಂದ್ರ ಮಸೂತಿ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಯಿತು.
ಮಕ್ಕಳ ಭರತನಾಟ ಸೇರಿ ಅನೇಕ ವೈವಿದ್ಯಮಯ ಕಾರ್ಯಕ್ರಮಗಳು ಜರುಗಿದವು. ಪ್ರಮುಖರಾದ ಸುರೇಶ ದೇಶಪಾಂಡೆ, ನಾಗಪ್ಪ ಸಜ್ಜನ್, ವೀರೇಂದ್ರಕುಮಾರ ಕೊಲ್ಲೂರ, ಪ್ರಭುಲಿಂಗ ಮೂಲಗೆ, ಸುರೇಶ ಲೇಂಗಟಿ, ಶಾಮಸುಂದರ ಕುಲಕರ್ಣಿ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಎಂ ಎನ್ ಸುಗಂಧಿ, ಪ್ರೊ. ಎಸ್ ಎಲ್ ಪಾಟೀಲ, ಕೆ.ಪಿ. ಗಿರಿಧರ, ನಾರಾಯಣ ಕುಲಕರ್ಣಿ, ಶಿವಾನಂದ ಸಾಲಿಮಠ, ಶಿವಲಿgಂಗಪ್ಪ ಅಷ್ಟಗಿ, ಇತರರು ಗಣ್ಯರು ಉಪಸ್ಥಿತರಿದ್ದರು.
ನಿರ್ಣಯಗಳು:
ಈ ಭಾಗದ ತೊಗರಿ ಬೆಳೆಗೆ ಬೆಂಬಲ ಬೆಲೆ ಕೊಡಬೇಕು.
ಜವಳಿ ಉದ್ಯಮದಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆ ನೀಡಬೇಕು.
ಖಾಸಗಿ ಕಂಪನಿಯಲ್ಲಿ ಕನ್ನಡ ಮಾಧ್ಯಮದ ಉದ್ಯೋಗಾಕಂಕ್ಷಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು.
ಕಲ್ಯಾಣ ಪ್ರದೇಶಾಭಿವೃದ್ಧಿ ಮಂಡಳಿಯಿಂ ಲೇಖಕರ ಪುಸ್ತಕಗಳನ್ನು ಖರೀದಿಸಬೇಕು.
ಕಲಬುರಗಿ ನಗರದ ಪ್ರಮುಖ ರಸ್ತೆಗಳಿಗೆ ಜಿಲ್ಲೆಯ ಸಾಹಿತಿಗಳ ಹೆಸರಿಡಲು ಆಗ್ರಹ.