ಹಣ ಹೂಡಿಕೆ ಮಾಡಿ ಲಾಭಗಳಿಸಿ ಎಂದು ನಂಬಿಸಿ 3.84 ಲಕ್ಷ ವಂಚನೆ
ಕಲಬುರಗಿ,ಆ.29-ನಕಲಿ ಅಪ್ಲಿಕೇಶನ್ ಮೂಲಕ ಹಣ ಹೂಡಿಕೆ ಮಾಡಿಕೊಂಡು ಲಾಭದ ಹಣ ಮತ್ತು ಹೂಡಿಕೆ ಮಾಡಿದ ಹಣ ಮರಳಿ ನೀಡದೆ ವ್ಯಕ್ತಿಯೊಬ್ಬರಿಗೆ 3.80 ಲಕ್ಷ ರೂ.ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶರಣಸಿರಸಗಿಯ ಕಾಶಿಕಮಲ್ ಅಪಾರ್ಟ್‍ಮೆಂಟ್ ನಿವಾಸಿ ನೇಡ್ಗಿ ಕೈಲಾಶ (36) ಎಂಬುವವರೆ ಕಣ ಕಳೆದುಕೊಂಡು ಕಂಗಾಲಾಗಿದ್ದಾರೆ.
ಪಿಆರ್‍ಒ ಆಗಿ ವೃತ್ತಿ ಮಾಡಿಕೊಂಡು ಉಪ ಜೀವನ ನಡೆಸುತ್ತಿರುವ ಕೈಲಾಶ ಅವರನ್ನು ಮುಂಬೈ ಮೂಲದ ಅದಿತಿ ಸಿಂಗ್ ಎಂಬುವವರು ಸಂಪರ್ಕಿಸಿ ಹಣ ಹೂಡಿಕೆ ಮಾಡಿ ಲಾಭ ಪಡೆಯಬಹುದು ಎಂದು ನಂಬಿಸಿ ಮೋಸದಿಂದ 3.84 ಲಕ್ಷ ಜಮಾ ಮಾಡಿಕೊಂಡು ಲಾಭದ ಹಣ ಮತ್ತು ಹೂಡಿಕೆ ಮಾಡಿದ ಹಣ ಮರಳಿ ನೀಡದೆ ವಂಚನೆ ಮಾಡಿದ್ದಾರೆ ಎಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.
ಸಂಶಯಾಸ್ಪದ ರೀತಿಯಲ್ಲಿ ಯುವಕ ಸಾವು
ಯುವಕನೊಬ್ಬ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಎಪಿಎಂಸಿ ಪ್ರದೇಶದಲ್ಲಿ ನಡೆದಿದೆ.
ಕುಸನೂರ ರಸ್ತೆಯ ಸರಸ್ವತಿಪುರ ಬಡಾವಣೆಯ ಹರ್ಷವರ್ಧನ ತಂದೆ ಗೌತಮ ಮೃತಪಟ್ಟ ಯುವಕ.
ಆ.27 ರಂದು ಬೆಳಿಗ್ಗೆ ಉಪಹಾರ ತರುವುದಾಗಿ ಮನೆಯಿಂದ ಹೊರಹೋದ ಹರ್ಷವರ್ಧನ 28 ರಂದು ರಾತ್ರಿ ಗೆಳೆಯ ರವಿಕುಮಾರ ಸೊಲಂಕರ (35) ಜತೆ ಸೇರಿ ಎಪಿಎಂಸಿ ಪ್ರದೇಶದಲ್ಲಿ ಮದ್ಯ ಸೇವಿಸಿ ಅಲ್ಲಿಯೇ ಇಬ್ಬರು ಮಲಗಿದ್ದಾರೆ. ಹರ್ಷವರ್ಧನ ಮಲಗಿದಲ್ಲಿಯೇ ಮೃತಪಟ್ಟಿದ್ದು, ತಮ್ಮ ಮಗನ ಸಾವಿನಲ್ಲಿ ಸಂಶಯವಿದೆ ಎಂದು ಹರ್ಷವರ್ಧನ ತಾಯಿ ಸುಜಾತಾ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.