ಕಾಳಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿ ಖರೀದಿ: ಮಹಿಳೆ ಬಂಧನ
ಕಲಬುರಗಿ,ಆ.29-ಇಲ್ಲಿನ ಮಿಲ್ಲತ್ ನಗರದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಪಡಿತರ ಅಕ್ಕಿ ಖರೀದಿ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ಇಲಾಖೆ ಸಹಾಯಕ ನಿರ್ದೇಶಕರು, ಆಹಾರ ನಿರೀಕ್ಷಕಿ ವಿದ್ಯಾಶ್ರೀ ಪಾಟೀಲ ಅವರು ಸಬ್ ಅರ್ಬನ್ ಪೊಲೀಸ್ ಠಾಣೆ ಪಿಎಸ್‍ಐ ಬಸವರಾಜ ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
ಮಿಲ್ಲತ್ ನಗರದ ಖನಿಜಾ ಬೇಗಂ ಅಲ್ತಪಖಾನ್ (35) ಎಂಬುವವರನ್ನು ಬಂಧಿಸಿ 4080 ರೂ.ಮೌಲ್ಯದ ಪಡಿತರ ಅಕ್ಕಿ ಮತ್ತು 40 ಸಾವಿರ ಮೌಲ್ಯದ ಟಂಟಂ ಜಪ್ತಿ ಮಾಡಿದ್ದಾರೆ. ಟಂಟಂ ಚಾಲಕ ಪರಾರಿಯಾಗಿದ್ದಾನೆ.
ಈ ಸಂಬಂಧ ಖನಿಜಾ ಬೇಗಂ, ಟಂಟಂ ಚಾಲಕ ಮತ್ತು ಮಾಲಿಕನ ವಿರುದ್ಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧನ
ನಗರ ಹೊರವಲಯದ ಶರಣಸಿರಸಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಐ ಸಂತೋಷ ಎಲ್.ತಟ್ಟೆಪಳ್ಳಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಶರಣಸಿರಸಗಿ ಗ್ರಾಮದ ಗುರುಶಾಂತಪ್ಪ ಅಂಕಲಗಿ ಎಂಬಾತನನ್ನು ಬಂಧಿಸಿ 1,230 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.