ಜಿಲ್ಲಾ ಕೇಂದ್ರಗಳಲ್ಲಿಯೇ ವಿಶೇಷ ಸಂಗೀತ, ನೃತ್ಯ, ತಾಳ ವಾದ್ಯ ಪರೀಕ್ಷೆ: ಸಂತಸ
ಕಲಬುರಗಿ,ಆ.29-ರಾಜ್ಯ ಮಟ್ಟದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳ ವಾದ್ಯ ಪರೀಕ್ಷೆಯನ್ನು ಜೂನಿಯರ್ ಜಿಲ್ಲಾ ಕೇಂದ್ರದಲ್ಲಿ, ವಿದ್ವತ್ ಪೂರ್ವ ಹಾಗೂ ವಿದ್ವತ್ ಅಂತಿಮ ಪರೀಕ್ಷೆಗಳನ್ನು ಬೇರೆ ಜಿಲ್ಲಾ ಕೇಂದ್ರಗಳಲ್ಲಿಯೇ ನಡೆಸುವಂತೆ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯ ಪರೀಕ್ಷಾ ವಿಭಾಗ ತನ್ನ ಅಂತರ್ಜಾಲ ಪುಟದಲ್ಲಿ ಆದೇಶ ಹೊರಡಿಸಿರುವುದಕ್ಕೆ ಕರ್ನಾಟಕ ಸಂಗೀತ ಪದವೀಧರರ ಸಂಘದ ಬಂಡಯ್ಯ ಸ್ವಾಮಿ ಸುಂಟನೂರ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ವಿದ್ವತ್ ಪೂರ್ವ ಹಾಗೂ ವಿದ್ವತ್ ಅಂತಿಮ ಪ್ರಾಯೋಗಿಕ ಪರೀಕ್ಷೆಯ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ಹೋಗಿ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸಲಾಗಿತ್ತು. ಇದನ್ನು ಮನಗಂಡು ಕರ್ನಾಟಕ ಸಂಗೀತ ಪದವೀಧರರ ಸಂಘ ಕಟುವಾಗಿ ಖಂಡಿಸಿ ಮೊದಲಿನಂತೆ ಸಂಗೀತ ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪರೀಕ್ಷೆಗಳನ್ನು ಜಿಲ್ಲಾ ಕೇಂದ್ರದಲ್ಲಿ ನಡೆಸಬೇಕು ವಿಶ್ವವಿದ್ಯಾನಿಲಯಕ್ಕೆ ಒತ್ತಾಯಿಸಿತ್ತು. ಅದರ ಫಲವಾಗಿ ಈಗ ವಿಶ್ವವಿದ್ಯಾನಿಲಯವು ಮೊದಲಿನಂತೆ ನಗರದ ಜಿಲ್ಲಾ ಕೇಂದ್ರದಲ್ಲಿ ಸಂಗೀತದ ಎಲ್ಲಾ ಪರೀಕ್ಷೆಗಳು ನಡೆಸುತ್ತಾ ಇರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಪರೀಕ್ಷಾ ವಿಭಾಗ ಹೊರಡಿಸಿರುವ ಸುತ್ತೋಲೆಯಲ್ಲಿ ಇದೆ ಸೆಪ್ಟೆಂಬರ್ 1 ಮತ್ತು 2ನೇ ತಾರೀಕಿನಂದು ಎರಡು ದಿನಗಳ ಕಾಲ ಕಲಬುರಗಿ ಜಿಲ್ಲೆಯ ಓಗಿ ಕಾಲೇಜಿನಲ್ಲಿ ಸಂಗೀತ ಮತ್ತು ತಾಳವಾದ್ಯ ವಿದ್ವತ್ ಪೂರ್ವ ಹಾಗೂ ವಿದ್ವತ್ ಅಂತಿಮ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ತನ್ನ ಅಂತರ್ಜಾಲದ ಪುಟದಲ್ಲಿ ಆದೇಶವನ್ನು ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ.