ಕೃಷಿ ಉದ್ಯಮಿಯಾಗಿ ಉದ್ಯೋಗ ಕಲ್ಪಿಸಿ: ಡಾ. ಎ.ಬಿ. ಪಾಟೀಲ ಕರೆ
ವಿಜಯಪುರ,ಆ.29: ನಗರ ಹೊರ ವಲಯದ ಭೂತನಾಳ ಕ್ರಾಸ್ ಹತ್ತಿರ ಇರುವ ಭಾಗ್ಯವಂತಿ ಜೈವಿಕ ಗೊಬ್ಬರ ಉತ್ಪಾದನಾ ಘಟಕಕ್ಕೆ ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎ. ಬಿ. ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎ. ಬಿ. ಪಾಟೀಲ ಅವರು, ತಾವು ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಇಲ್ಲಿಯೇ ತಮ್ಮ ಕೃಷಿ ಪದವಿ ವ್ಯಾಸಂಗ ಮುಗಿಸಿ ಏನಾದರೂ ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲದೊಂದಿಗೆ ಸಾವಯವ ಕೃಷಿ ಮಾಡುವ ರೈತರಿಗೆ ಕಡಿಮೆ ದರದಲ್ಲಿ ಜೈವಿಕ ಗೊಬ್ಬರಗಳನ್ನು ಉತ್ಪಾದನೆ ಮಾಡುವ ಘಟಕ ಸ್ಥಾಪಿಸಿದ ಮಹಾದೇವ ಚವ್ಹಾಣ ಇವರ ಕಾರ್ಯಕ್ಷಮತೆಯನ್ನು ಕೊಂಡಾಡಿದರು.
ನಂತರ ತಾವು ಒಬ್ಬ ಸೂಕ್ಷ್ಮಾಣು ಜೀವಿ ತಜ್ಞರಾಗಿದ್ದು, ಜೈವಿಕ ಗೊಬ್ಬರಗಳ ಬಳಕೆಯಿಂದ ರಸಗೊಬ್ಬರ ಬಳಕೆ ಕಡಿಮೆ ಮಾಡಬಹುದಾಗಿದ್ದು, ಖರ್ಚು ಕಡಿಮೆಯಾಗುವುದು. ಜೈವಿಕ ಗೊಬ್ಬರಗಳು ಪರಿಸರ ಸ್ನೇಹಿಯಾಗಿದ್ದು, ಅನೇಕ ಜೈವಿಕ ಗೊಬ್ಬರಗಳು ಒಂದು ಅಥವಾ ಹಲವಾರು ಪೋಷಕಾಂಶಗಳನ್ನು ಒದಗಿಸುವುದಲ್ಲದೇ, ಅನೇಕ ತರಹದ ಬೆಳೆ ಪ್ರಚೋದಕ ವಸ್ತುಗಳನ್ನು ನೇರವಾಗಿ ಗಿಡಗಳಿಗೆ ಒದಗಿಸುವ ಶಕ್ತಿ ಹೊಂದಿರುತ್ತವೆ. ಸಮಗ್ರ ಪೋಷಕಾಂಶ ನಿರ್ವಹಣೆ ಮತ್ತು ಸಾವಯವ ಕೃಷಿಯಲ್ಲಿ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸುವ ಮುಖ್ಯ ಅಂಗವಾಗಿರುತ್ತದೆ. ಇಂತಹ ರೈತ ಸ್ನೇಹಿ ಕೆಲಸ ಮಾಡುತ್ತಿರುವ ನವ ಉದ್ಯಮಿಗೆ ಸರಕಾರದಿಂದ ಸಹಾಯ ಸಹಕಾರ ಒದಗಿಸುವ ಭರವಸೆ ನೀಡಿದರು.
ನಂತರ ಡಾ. ಎ. ಬಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ, ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಹಿರಿಯ ವಿಜ್ಞಾನಿ ಡಾ. ಎಸ್.ಎಂ. ವಸ್ತ್ರದ, ಪದ್ಮಪ್ರಕಾಶ ಶಿವಮಠ, ಶಿವಪುತ್ರ ಭಂಡರಕೋಟಿ ಉಪಸ್ಥಿತರಿದ್ದರು.