ಮೈಮನ ರೋಮಾಂಚನಗೊಳಿಸಿದ ವಿವಿಧ ಕಸರತ್ತಿನ ಸ್ಪರ್ಧೆ
ಬಸವನಬಾಗೇವಾಡಿ, ಆ.29:ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ದೇವರ ಜಾತ್ರಾಮಹೋತ್ಸವದಂಗವಾಗಿ ಮೂರನೇ ದಿನವಾದ ಬುಧವಾರ ಬಸವೇಶ್ವರ ದೇವಸ್ಥಾನದ ಸಿಬಿಎಸ್ಸಿ ಶಾಲಾ ಆವರಣದಲ್ಲಿ ಜರುಗಿದ ವಿವಿಧ ಭಾರ ಎತ್ತುವ ಕಸರತ್ತಿನ ಸ್ಪರ್ಧೆಗಳು ಜನರ ಮೈಮನ ರೋಮಾಂಚನ ಗೊಳಿಸಿದವು.
ಈ ಸಲ ಜಾತ್ರಾ ಉತ್ಸವ ಸಮಿತಿಯು ಭಾರ ಎತ್ತುವ ಸ್ಪರ್ಧಾ ಕಣವನ್ನು ಎತ್ತರ ಮಟ್ಟದಲ್ಲಿ ನಿರ್ಮಾಣ ಮಾಡಿದ್ದರಿಂದಾಗಿ ಎಲ್ಲ ಜನರಿಗೆ ಫ್ವೆಲ್ವಾನರು ಭಾರ ಎತ್ತುವ ದೃಶ್ಯವನ್ನು ಕಾಣಬಹುದಿತ್ತು. 95 ಕೆಜಿ, 1 ಕ್ವಿಂಟಾಲ್, 1 ಕ್ವಿಂಟಾಲ್ಕ್ಕಿಂತಲೂ ಹೆಚ್ಚಿನ ಭಾರವಾದ ಗುಂಡುಗಲ್ಲು, ಸಂಗ್ರಾಣಿ ಕಲ್ಲು ಎತ್ತುವಾಗ ಜನರು ಸುಡು ಬಿಸಿಲನ್ನು ಲೆಕ್ಕಿಸದೇ ಕೇಕೇ ಹಾಕುವ ಜೊತೆಗೆ ವಾವ್ಹ್ ವಾವ್ಹ್ ಭೇಷ್ ಎಂದು ಉದ್ಗಾರ ತೆಗೆಯುವ ಮೂಲಕ ಭಾರ ಎತ್ತುವ ಫ್ವೆಲ್ವಾನರಿಗೆ ಹುರಿದುಂಬಿಸುತ್ತಿದ್ದರು. ಇದರಿಂದಾಗಿ ಫ್ವೆಲ್ವಾನರು ಜನರು ನಿರಾಶೆಯಾಗದಂತೆ ತಮ್ಮ ಎಲ್ಲ ಶಕ್ತಿಯನ್ನು ಉಪಯೋಗಿಸಿ ಭಾರ ಎತ್ತುವುದು ಕಂಡುಬಂದಿತ್ತು. ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಸವೇಶ್ವರ ಜಾತ್ರಾ ಉತ್ಸವ ಸಮಿತಿಯಿಂದ ಬೆಳ್ಳಿ ಕಡಗ ನೀಡಿ ಸನ್ಮಾನಿಸಲಾಯಿತು.
ಈ ಸ್ಪರ್ಧೆಯಲ್ಲಿ 2.15 ಕೆಜಿ ಗುಂಡುಗಲ್ಲು ಎತ್ತುವ ಫ್ವೆಲ್ವಾನ್ ಅವರಿಗೆ ದೇವರಹಿಪ್ಪರಗಿ ತಾಲೂಕಿನ ಹರನಾಳ ಗ್ರಾಮದ ಮಾಜಿ ಫ್ವೆಲ್ವಾನ್ ಆನಂದ ಗುಣಕಿ ಅವರು 50 ತೊಲಿಯ ಬೆಳ್ಳಿ ಗದೆಯನ್ನು ಜಾತ್ರಾ ಉತ್ಸವ ಸಮಿತಿಗೆ ಸಿದ್ದಲಿಂಗಶ್ರೀ, ಶಿವಕುಮಾರಶ್ರೀ, ಈರಣ್ಣ ಪಟ್ಟಣಶೆಟ್ಟಿ ಅವರ ಮೂಲಕ ಹಸ್ತಾಂತರಿಸಿದರು. ಈ ವರ್ಷದ ಸ್ಪರ್ಧೆಯಲ್ಲಿ ಯಾವ ಫ್ವೆಲ್ವಾನ್ 2.15 ಕೆಜಿ ಗುಂಡುಗಲ್ಲು ಎತ್ತುತ್ತಾನೋ ಅವನಿಗೆ ಈ ಬೆಳ್ಳಿ ಗದೆ ಹೆಗಲೇರುವದು. ಇಲ್ಲದೇ ಹೋದರೆ ಮುಂದಿನ ಜಾತ್ರೆಯಲ್ಲಿ ಈ ಸಾಧನೆ ಮಾಡುವ ಫ್ವೆಲ್ವಾನ್ ನಿಗೆ ಗದೆ ಬಹುಮಾನವಾಗಿ ದೊರಕಲಿದೆ. ಒಂದು ವೇಳೆ ಮುಂದಿನ ವರ್ಷವೂ ಈ ಸಾಧನೆ ಯಾರು ಮಾಡದೇ ಹೋದರೆ ಈ ಗದೆಯು ಜಾತ್ರಾ ಉತ್ಸವ ಸಮಿತಿಯ ಹತ್ತಿರ 10 ವರ್ಷಗಳ ಕಾಲ ಇರಲಿದೆ. ಈ ಅವಧಿಯಲ್ಲಿ ಯಾರೂ ಈ ಸಾಧನೆ ಮಾಡುತ್ತಾರೋ ಅವರಿಗೆ ಈ ಗದೆ ಫ್ವೆಲ್ವಾನನ ಹೆಗಲೇರಲಿದೆ ಎಂದು ಹಿರಿಯ ಜನಪದ ಗಾಯಕ, ನಿರೂಪಕ ಬಸವರಾಜ ಹಾರಿವಾಳ ಹೇಳಿದರು.ಈ ಸಲ ಇಬ್ಬರು ಫ್ವೆಲ್ವಾನರು ಈ ಕಲ್ಲು ಗುಂಡು ಎತ್ತಲು ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಈ ಬೆಳ್ಳಿ ಗದೆ ಜಾತ್ರಾ ಉತ್ಸವ ಸಮಿತಿಯಲ್ಲಿಯೇ ಉಳಿದುಕೊಂಡಿತ್ತು.
ಈ ಸ್ಪರ್ಧೆಯಲ್ಲಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ್ದ ಫ್ವೆಲ್ವಾನರು ಭಾಗವಹಿಸಿದ್ದರು.
ವಿವಿಧ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರುಃ ಸಂಗ್ರಾಣಿ ಕಲ್ಲು ಸಾಗ ಎತ್ತುವ ಸ್ಪರ್ಧೆಯಲ್ಲಿ ನರಗುಂದದ ಮುತ್ತು ನಂದಪ್ಪ ಬನಹಟ್ಟಿ ಪ್ರಥಮ, ಬೀಳಗಿಯ ರಿಯಾಜ್ ಜಮಾದಾರ ಬಿಸನಾಳ ದ್ವಿತೀಯ, ಜತ್ತದ ಜಗನಾಥ ಪವಾರ ಆಸಂಗಿ, ಬನಹಟ್ಟಿಯ ರುದ್ರೇಶ ಮಂಜುನಾಥ ತಳವಾರ ತೃತೀಯ ಸ್ಥಾನ, ಸಂಗ್ರಾಣಿ ಕಲ್ಲು ವತ್ತಿ ಎತ್ತುವ ಸ್ಪರ್ಧೆಯಲ್ಲಿ ಮೆಳ್ಳವಂಕಿಯ ಶಿವಾನಂದ ಜಾಡಣ್ಣನವರ ಪ್ರಥಮ, ಗುಳೇದಗುಡ್ಡದ ವಿಠ್ಠಲ ಮುತ್ತಪ್ಪ ಮನ್ನಿಕಟ್ಟಿ ದ್ವಿತೀಯ, ನಾಗೂರಿನ ಮುತ್ತಪ್ಪ ಶರಣಪ್ಪ ಕಡ್ಲಿಮಟ್ಟಿ ತೃತೀಯ ಸ್ಥಾನ, ಗುಂಡು ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪೂರಿನ ಶಿವಲಿಂಗಪ್ಪ ಶಿರೂರ ಪ್ರಥಮ, ಯಾಳವಾರದ ಮಾಳಪ್ಪ ಕೊಂಡಗುಳಿ ದ್ವಿತೀಯ, ಜತ್ತ ತಾಲೂಕಿನ ಶಿಡ್ಯಾಳದ ಬೀರಪ್ಪ ಗೊಗವಾಡ ತೃತೀಯ ಸ್ಥಾನ, ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಗೋನಾಳದ ವಿಠ್ಠಲ ರಾಮಣ್ಣ ಹಡಗಲಿ ಪ್ರಥಮ, ಹೊನ್ನಾಕಟ್ಟಿಯ ಶಿವನಪ್ಪ ಮಾರುತಿ ನರಗುಂದ ದ್ವಿತೀಯ, ಗುನ್ನಾಪೂರಿನ ಪ್ರವೀಣ ಗುನ್ನಾಪುರ ತೃತೀಯ ಸ್ಥಾನ, ಹಲ್ಲಿನಿಂದ ಕಬ್ಬಿಣದ ಹಾರಿ ಎತ್ತುವ ಸ್ಪರ್ಧೆಯಲ್ಲಿ ಮುಳಸಾವಳಗಿಯ ರಮೇಶ ಪಾಟೀಲ ಪ್ರಥಮ, ಇಂಗಳಗಿಯ ಮಾಳಪ್ಪ ಪೂಜಾರಿ ದ್ವಿತೀಯ, ಮೆಟ್ಟ ಮೇಲೆ ಚೀಲ ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪೂರಿನ ಬೀರಪ್ಪ ಲೋಗಾವಿ ಪ್ರಥಮ, ಇಂಗಳಗೇರಿಯ ಕರೆಪ್ಪ ಬೀರಪ್ಪ ಪೂಜಾರಿ ದ್ವಿತೀಯ,ಉಸುಕಿನ ಕೊಡ ಎತ್ತುವ ಸ್ಪರ್ಧೆಯಲ್ಲಿ ಸುರಪುರದ ಭೀಮಣ್ಣ ನಗನೂರ ಪ್ರಥಮ, ಸುರಪುರದ ಅನಿಲ ನಗನೂರ ದ್ವಿತೀಯ, ತೆಕ್ಕಿ ಬಡೆದು ಹಾರಿ ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪೂರಿನ ಬೀರಪ್ಪ ಲೋಗಾವಿ ಪ್ರಥಮ, ಮಸಬಿನಾಳದ ಅಲಿತಾಪ ಬಾಗವಾನ ದ್ವಿತೀಯ ಸ್ಥಾನ ಪಡೆದುಕೊಂಡರು.
ತೆಲಗಿಯ ಶಾಂತಪ್ಪ ಈರಗಾರ ಅವರು ಸಂಗ್ರಾಣಿ ಕಲ್ಲು ಹಗ್ಗ ಕಟ್ಟಿ ಬಾಯಿಂದ ಜಗ್ಗುವ ಮೂಲಕ ಗಮನ ಸೆಳೆದರೆ, ಮುತ್ತಗಿಯ ಪರಶುರಾಮ ಹೂಗಾರ ಅವರು ಮೀಸಿಯಿಂದ ಸಂಗ್ರಾಣಿ ಕಲ್ಲು ಎತ್ತಿ ಸೈ ಎನಿಸಿಕೊಂಡರು.
ಈ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ, ಧುರೀಣರಾದ ಶೇಖರ ಗೊಳಸಂಗಿ, ಶಂಕರಗೌಡ ಬಿರಾದಾರ, ಬಸವರಾಜ ಗೊಳಸಂಗಿ, ಎಂ.ಜಿ.ಆದಿಗೊಂಡ, ಸಂಗಮೇಶ ಓಲೇಕಾರ, ಸಂಗಯ್ಯ ಒಡೆಯರ, ಸುಭಾಸ ಗಾಯಕವಾಡ, ಮೀರಾಸಾಬ ಕೊರಬು, ಸಂಗಪ್ಪ ಡಂಬಳ, ಮಹಾಂತೇಶ ಹಂಜಗಿ, ಪ್ರವೀಣ ಪೂಜಾರಿ, ಮುತ್ತು ಪತ್ತಾರ, ಬಸವರಾಜ ಅಳ್ಳಗಿ, ಎಂ.ಬಿ.ತೋಟದ, ದಯಾನಂದ ಜಾಲಗೇರಿ, ಬೀರಪ್ಪ ಪೂಜಾರಿ, ಕಾಂತು ರೆಡ್ಡರ, ಶ್ರೀಕಾಂತ ಬಾಡಗಿ, ಶಿವಪ್ಪ ಶೀಕಳವಾಡಿ, ಉಸ್ಮಾನ ಬೊಮ್ಮನಹಳ್ಳಿ, ನಾಗರಾಜ ಗುಂದಗಿ ಸೇರಿದಂತೆ ಇತರರು ಇದ್ದರು.