ಗಾಂಜಾ ಮಾರಾಟ ಯುವಕರಿಬ್ಬರ ಬಂಧನ
ಶಿವಮೊಗ್ಗ, ಆ. ೨೯: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಶಿವಮೊಗ್ಗ ತಾಲೂಕು ಆಯನೂರು ಗ್ರಾಮದ ಹಾಸ್ಟೆಲ್ ರಸ್ತೆಯಲ್ಲಿ ನಡೆದಿದೆ.
ಹಾರನಹಳ್ಳಿಯ ಶಾಂತಿನಗರ ನಿವಾಸಿ ವಿಷ್ಣು ಪಿ (೨೬) ಹಾಗೂ ನಾರಾಯಣಪುರ ಗ್ರಾಮದ ನಿವಾಸಿ ಸುನೀಲ್ ನಾಯ್ಕ್ (೩೦) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಆರೋಪಿಗಳು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತಂತೆ ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳಿಂದ ೧೨ ಸಾವಿರ ರೂ. ಮೌಲ್ಯದ ೩೧೦ ಗ್ರಾಂ ತೂಕದ ಒಣ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ೧. ೫೦ ಲಕ್ಷ ರೂ. ಮೌಲ್ಯದ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಎ ಜಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುರೇಶ್ ಎಂ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಹರೀಶ್ ಕೆ ಪಾಟೀಲ್, ಸಬ್ ಇನ್ಸ್’ಪೆಕ್ಟರ್ ಶಾಂತರಾಜ್ ಹೆಚ್ ಜಿ ಮತ್ತವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.