ನೈಜತೆ ಬಿಂಬಿಸುವಲ್ಲಿ ವಿಫಲವಾಗುತ್ತಿರುವ ಮಾಧ್ಯಮ:ನಾಡಗೌಡ
ಮುದ್ದೇಬಿಹಾಳ: ಆ.29:ಮಾಧ್ಯಮ ಮೊನಚು ಕಳೆದುಕೊಳ್ಳುತ್ತಿದೆ. ವಸ್ತುನಿಷ್ಠತೆಗೆ ಆದ್ಯತೆ ಕೊಡಬೇಕಿರುವ ಜಾಗದಲ್ಲಿ ಸಮಾಜಘಾತುಕರನ್ನು ವಿಜೃಂಭಿಸುತ್ತಿವೆ. ಸಾಮಾಜಿಕ ಬದಲಾವಣೆ ತರುವಲ್ಲಿ ತನ್ನ ಮಹತ್ವದ ಪಾತ್ರ ಮರೆತು, ಕನ್ನಡಿಯಂತೆ ಕೆಲಸ ಮಾಡಿ ನೈಜತೆ ಬಿಂಬಿಸುವಲ್ಲಿ ವಿಫಲವಾಗುತ್ತಿದೆ ಎಂದು ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ಇಲ್ಲಿನ ಎಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಆಪ್ ಬ್ಯಾಂಕ್‍ನ ಸಭಾ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸೌಲಭ್ಯ ವಿತರಣೆ, ಕೆಯುಡಬ್ಲುಜೆ ತಾಲೂಕು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಂದು ಸಂಘದಲ್ಲಿನ ಭಿನ್ನಾಭಿಪ್ರಾಯ ಬೇರೊಂದು ಸಂಘದ ಹುಟ್ಟಿಗೆ ಕಾರಣವಾಗುತ್ತಿರುವುದು ವಿಷಾಧಕರ. ಯಾವ ರಂಗದಲ್ಲೂ ಇಂದು ಧರ್ಮ ಉಳಿದಿಲ್ಲ. ಮಾಧ್ಯಮ ನೈಜತೆಗೆ ಹೆಚ್ಚಿನ ಒತ್ತು ಕೊಟ್ಟರೆ ಅವುಗಳಿಗೆ ಮಹತ್ವ, ಮನ್ನಣೆ ಇರುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಮಾತನಾಡಿ ಪತ್ರಕರ್ತರು, ಪತ್ರಿಕೆ ಹಂಚುವವರಿಗೆ ಕರ್ಣಾಟಕ ಬ್ಯಾಂಕ್, ಪೋಸ್ಟ್‍ನಲ್ಲಿ ಲಭ್ಯವಿರುವ ಜೀವ ವಿಮಾ ಸೌಲಭ್ಯ ಕಲ್ಪಿಸಿಕೊಡಲು ಅಸ್ಕಿ ಫೌಂಡೇಶನ್‍ನಿಂದಲೇ ಪ್ರಾರಂಭಿಕ ಕಂತನ್ನು ತುಂಬಲಾಗುತ್ತದೆ. ಮುಂದಿನ ಕಂತುಗಳನ್ನು ಅವರೇ ತುಂಬಿಕೊಳ್ಳಬೇಕು. ಅವಘಡ ಸಂಭವಿಸಿದಾಗ ಕಡಿಮೆ ಸಮಯದಲ್ಲಿ ಅವಘಡದ ಪ್ರಮಾಣ ಆಧರಿಸಿ 10 ಲಕ್ಷ ರೂವರೆಗೂ ವಿಮಾ ಮೊತ್ತ ದೊರಕುತ್ತದೆ. ಸಂಘದವರು ಸಹಕರಿಸಬೇಕು ಎಂದರು.
ಯುವ ಉದ್ಯಮಿ ಭರತ್ ಪಾಟೀಲ ನಡಹಳ್ಳಿ ಮಾತನಾಡಿ, ಮಾಧ್ಯಮದವರ ಮೇಲೆ ಯುವಜನತೆ ಇಟ್ಟಿರುವ ನಂಬಿಕೆ ಹುಸಿಯಾಗದಂತೆ ನೋಡಿಕೊಳ್ಳಬೇಕು. ಮಾಧ್ಯಮದವರು ಒಳ್ಳೇಯದನ್ನು ಪ್ರೋತ್ಸಾಹಿಸಬೇಕು ಎಂದರು.
ದಿವ್ಯಸಾನಿಧ್ಯ ವಹಿಸಿದ್ದ ಕುಂಟೋಜಿ ಭಾವೈಕ್ಯತಾ ಮಠದ ಡಾ| ಶ್ರೀಗುರು ಚನ್ನವೀರ ಶಿವಾಚಾರ್ಯರು ಮಾತನಾಡಿ ಸತ್ಯಾಸತ್ಯತೆ ತಿಳಿದುಕೊಂಡು ಬರೆಯಬೇಕು. ವ್ಯಕ್ತಿಯ ತೇಜೋವಧೆ ಸಲ್ಲದು. ಬರವಣಿಗೆಯಲ್ಲಿ ವಸ್ತುನಿಷ್ಠತೆ ಇರಬೇಕು. ಮಾಧ್ಯಮ ಶೋಷಿತರ, ದಮನಿತರ, ನೊಂದವರ ಧ್ವನಿಯಾಗಬೇಕು. ಸತ್ಯವನ್ನು ತಿಳಿಸುವ ಧೈರ್ಯ ಹೊಂದಿರಬೇಕು ಎಂದರು.
ಉಪನ್ಯಾಸಕ ಪರಶುರಾಮ ಚೌಡಕೇರ, ಗಣ್ಯರಾದ ಪ್ರಭುರಾಜ ಕಲಬುರ್ಗಿ, ಸತೀಶಕುಮಾರ ಓಸ್ವಾಲ, ಎಂ.ಎನ್.ಮದರಿ, ಮೋಹನ ಕುಲಕರ್ಣಿ, ಪ್ರಕಾಶ ಬೆಣ್ಣೂರ, ಕೆ.ಕೆ.ಕುಲಕರ್ಣಿ, ಬಾಪುಗೌಡ ಪಾಟೀಲ, ಎಸ್.ಕೆ.ಘಾಟಿ, ಪಾರ್ವತಿ ಕೋಳೂರ, ಗುರು ತಾರನಾಳ, ರಾಮಣ್ಣ ಖಾನಾಪುರ, ಮಹಾವೀರ ಸಗರಿ ವೇದಿಕೆಯಲ್ಲಿದ್ದರು.
ರಕ್ಕಸಗಿಯ ದಿವ್ಯಾಂಗ ಪತ್ರಿಕಾ ವಿತರಕ ಬಸವರಾಜ ಕುಂಟೋಜಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್‍ನಿಂದ ಮಂಜೂರು ಮಾಡಿದ 1000 ರೂ ಮಾಸಾಶನ ಸೌಲಭ್ಯದ ಆದೇಶ ಪತ್ರವನ್ನು ಯೋಜನಾಧಿಕಾರಿ ನಾಗೇಶ ಪಿ.ಎನ್. ಅವರು ಶಾಸಕರ ಮುಖಾಂತರ ವಿತರಿಸಿದರು. ಪತ್ರಿಕೆಗಳನ್ನು ಮನೆಮನೆಗೆ ಹಂಚುವ ಹುಡುಗರಿಗೆ ಬಟ್ಟೆ, ನಗದು ವಿತರಿಸಲಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾಧ್ಯಮದ ಪಾತ್ರ ಕುರಿತಾದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ 1000 ರೂ ನಗದು, ಪ್ರಶಸ್ತಿ ಪತ್ರ ನೀಡಿ ಸಿ.ಬಿ.ಅಸ್ಕಿಯವರು ಪುರಸ್ಕರಿಸಿದರು. ಸಾಧಕರಾದ ಉದ್ಯಮಿ ಸಿ.ಪಿ.ಸಜ್ಜನ, ವೆಂಕನಗೌಡ ಪಾಟೀಲ, ಕಾಮರಾಜ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
11 ಪತ್ರಕರ್ತರಿಗೆ ಕೆಯುಡಬ್ಲುಜೆ ತಾಲೂಕು ಪ್ರಶಸ್ತಿ ನೀಡಲಾಯಿತು. ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿ ನಾಡಗೀತೆ ನಡೆಸಿಕೊಟ್ಟರು. ಎಚ್.ಆರ್.ಬಾಗವಾನ ಸ್ವಾಗತಿಸಿದರು. ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಿ.ಬಿ.ವಡವಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಹೂಗಾರ ನಿರೂಪಿಸಿದರು. ಸಂಘದ ತಾಲೂಕು ಅಧ್ಯಕ್ಷ ಮುತ್ತು ವಡವಡಗಿ ವಂದಿಸಿದರು. ಕಲಾಸಿಂಚನ ಮೆಲೋಡಿಸ್‍ನ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.