ಮಹಿಳೆಯರ , ಮಕ್ಕಳ ಮೇಲಿನ ಸಾಮಾಜಿಕ ದೌರ್ಜನ್ಯಗಳನ್ನು ತಡೆಗಟ್ಟಲು ಆಗ್ರಹ
ಸಂಜೆವಾಣಿ ವಾರ್ತೆ
ಬಳ್ಳಾರಿ. ಆ.29- ಎಐಎಮ್ಎಸ್ಎಸ್ ಜಿಲ್ಲಾ ಸಮಿತಿಯ ವತಿಯಿಂದ  ಭಾರತ ನವೋದಯದ ಮಹಾನ್ ಚೇತನ ಈಶ್ವರಚಂದ್ರ ವಿದ್ಯಾಸಾಗರ್‌ರವರ ಸ್ಮರಣೆ ಮಾಸಾಚರಣೆಯ ಸಮಾರೋಪದ ಅಂಗವಾಗಿ ಎಐಎಮ್‌ಎಸ್‌ಎಸ್ ಜಿಲ್ಲಾ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳೆಯರ , ಮಕ್ಕಳ ಮೇಲಿನ ಸಾಮಾಜಿಕ ದೌರ್ಜನ್ಯಗಳನ್ನು ತಡೆಗಟ್ಟಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಮ್ ಎಸ್‌ಎಸ್)ನ ಜಿಲ್ಲಾ ಅಧ್ಯಕ್ಷರಾದ ಕೆ.ಎಂ.ಈಶ್ವರಿಯವರು ಮಾತನಾಡುತ್ತಾ, ಈ ಯುಗದಲ್ಲಿ ಶಿಕ್ಷಣ ಪಡೆದ ಪ್ರತಿಯೊಬ್ಬ ಹೆಣ್ಣುಮಗಳು ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕಾದ ವ್ಯಕ್ತಿತ್ವ ಈಶ್ವರಚಂದ್ರ ವಿದ್ಯಾಸಾಗರ್. ಅಂದಿನ ಕಟ್ಟಾ ಸಂಪ್ರದಾಯ ಪದ್ಧತಿಗಳ ವಿರುದ್ಧ ಹೋರಾಡಿದರು. ವಿಧವಾ ಪುನ‌ರ್ ವಿವಾಹಕ್ಕೆ ಪ್ರೋತ್ಸಾಹಿಸಿ ಬಾಲ್ಯ ವಿವಾಹದ ವಿರುದ್ಧ ಧ್ವನಿ ಎತ್ತಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಜೀವನ ಪರ್ಯಂತ ಶ್ರಮಿಸಿದ್ದಾರೆ. ಇಂದಿನ ಮಹಿಳಾ ಸಮುದಾಯಕ್ಕೆ ಈಶ್ವರಚಂದ್ರ ವಿದ್ಯಾಸಾಗರ್‌ರಂತಹ ಮಹಾನ್ ವ್ಯಕ್ತಿಗಳ ವಿಚಾರಧಾರೆಯ ಅವಶ್ಯಕತೆಯಿದೆ.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಮ್ಎಸ್‌ಎಸ್)ಯು ದೇಶದಾದ್ಯಂತ ಮಹಿಳೆಯರ ಹಕ್ಕುಗಳಿಗಾಗಿ, ಮಹಿಳೆಯರ ಘನತೆಯ ಬದುಕಿಗಾಗಿ ಶ್ರಮಿಸುತ್ತಿದೆ. ಮಹಿಳೆಯರ ಜ್ವಲಂತ ಸಮಸ್ಯೆಗಳಾದ ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ. ಅಪೌಷ್ಟಿಕತೆ, ಬಾಲ್ಯ ವಿವಾಹ, ಅಭದ್ರತೆ, ಸ್ತ್ರೀ ಭ್ರೂಣ ಹತ್ಯೆ, ಲಿಂಗ ತಾರತಮ್ಯ ಹಾಗೂ ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಸಂಘಟಿಸುತ್ತಿದೆ. ಹಳೆಯ ಊಳಿಗಮಾನ್ಯ ವ್ಯವಸ್ಥೆಯ ಪುರುಷ ಪ್ರಧಾನ ಮೌಲ್ಯಗಳ ಜೊತೆಗೆ ಹೆಣ್ಣು ಭೋಗದ ವಸ್ತು ಎಂಬಂತೆ ಬಿತ್ತರಿಸುವ ಅಶ್ಲೀಲ-ಸಿನಿಮಾ ಸಾಹಿತ್ಯ, ಜಾಹಿರಾತುಗಳು, ಪೋರ್ನ್ ವೆಬ್‌ಸೈಟ್ಗಳು, ಮದ್ಯ- ಮಾದಕ ವಸ್ತುಗಳು ಯುವ ಜನತೆಯನ್ನು ದಾರಿ ತಪ್ಪಿಸುತ್ತಿವೆ. ಸಮಾಜದಲ್ಲಿ ಅಪರಾಧಗಳು ಹೆಚ್ಚುವಂತೆ ಪ್ರೇರೇಪಿಸುತ್ತಿವೆ. ಸಾಮಾಜಿಕ ವಾತಾವರಣದಲ್ಲಿ ಮೌಲ್ಯಗಳು ಕುಸಿಯುತ್ತಿವೆ.
ಈ ಸಾಂಸ್ಕೃತಿಕ ಅಧಃಪತನದಿಂದಾಗಿ ಪುಟ್ಟ ಕಂದಮ್ಮಗಳಿಂದ ಹಿಡಿದು ವಯೋವೃದ್ಧರವರೆಗೂ ನಡೆಯುತ್ತಿರುವ ಲೈಂಗಿಕ ಅಪರಾಧಗಳು, ಪ್ರೀತಿಯ ನಿರಾಕರಣೆಯನ್ನು ಸಹಿಸದ ಸೇಡಿನ ಮನೋಭಾವದಿಂದ ಆಸಿಡ್ ದಾಳಿಗಳು, ಮರ್ಯಾದೆಗೇಡು ಹತ್ಯೆಗಳು ಇಡೀ ನಾಗರಿಕ ಸಮಾಜವೇ ತಗ್ಗಿಸುವಂತೆ ಮಾಡಿವೆ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 13,477 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿರುವುದು ಭಾರಿ ಆತಂಕವನ್ನು ಮೂಡಿಸಿದೆ. ಇಂತಹ ಗಂಭೀರ ಸಮಸ್ಯೆಗಳ ವಿರುದ್ಧ ಸರ್ಕಾರವು ಗಮನಹರಿಸಬೇಕು ಹಾಗೂ ಇನ್ನಿತರ ಹಲವಾರು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಎಮ್ಎಸ್ಎಸ್ ಸಂಘಟನೆಯ ಉಪಾಧ್ಯಕ್ಷರಾದ ಪದ್ಮಾವತಿ, ಪದಾಧಿಕಾರಿಗಳಾದ ರೇಖಾ, ವಿದ್ಯಾ, ಅಭಿಲಾಷ, ಸೌಮ್ಯ ಜೆ. ಗಿರಿಜಾ, ಕರಿಬಸಮ್ಮ, ಪಾರ್ವತಿ ಉಪಸ್ಥಿತರಿದ್ದರು .