ತಾಪಂ : ಕ್ರಿಯಾ ಯೋಜನೆಗೆ ಅನುಮೋದನೆ
ಔರಾದ್ :ಆ.29: 2024-25ನೇ ತಾಲೂಕು ಪಂಚಾಯತ ಲಿಂಕ ಕಾರ್ಯಕ್ರಮದಡಿ ಕ್ರಿಯಾ ಯೋಜನೆ ಸಿದ್ಧಪಡಿಸಲು, ನಿಗದಿಪಡಿಸಿದ ಅನುದಾನಕ್ಕೆ ತಾಪಂ ಆಡಳಿತಾಧಿಕಾರಿ ಜಗನ್ನಾಥ ಮೂರ್ತಿ ಬುಧವಾರ ಅನುಮೋದನೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ 121 ಕೋಟಿ, 31.99 ಲಕ್ಷ ರೂ, ವೈದ್ಯಕೀಯ ಮತ್ತು ಜನಾರೋಗ್ಯ 10.11 ಲಕ್ಷ, ಸಮಾಜ ಕಲ್ಯಾಣ ಇಲಾಖೆ 1.63 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ 16.07 ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 5 ಕೋಟಿ 56.43 ಲಕ್ಷ, ಪೌಷ್ಟಿಕ ಆಹಾರ 2 ಕೋಟಿ, 54.22 ಲಕ್ಷ ರೂ, ಕೃಷಿ/ಜಲಾನಯನ 87.42 ಲಕ್ಷ, ಪಶು ಸಂಗೋಪನೆ 5 ಕೋಟಿ, 30.20 ಲಕ್ಷ ರೂ, ಸಹಕಾರ ಇಲಾಖೆ 1.08 ಲಕ್ಷ ರೂ, ಪಂಚಾಯತ ರಾಜ್ ಸಂಸ್ಥೆಗಳಿಗೆ ಅನುದಾನ 4 ಕೋಟಿ, 80.10 ಲಕ್ಷ ರೂ, ರೇಷ್ಮೆ ಇಲಾಖೆ 0.15 ಲಕ್ಷ ರೂ, ನೀರು ಸರಬರಾಜು ಮತ್ತು ನೈರ್ಮಲ್ಯ 3.49 ಲಕ್ಷ ರೂ ಸೇರಿ ಒಟ್ಟು 142 ಕೋಟಿ, 34.26 ಲಕ್ಷ ರೂ. ಹಾಗೂ ತಾಲೂಕು ಪಂಚಾಯತ ಅನಿಭರ್ಂಧಿತ ಅನುದಾನ ರೂ. 1 ಕೋಟಿ, 69.85 ಲಕ್ಷ ರೂ. ಅನುಮೋದನೆ ನೀಡಲಾಯಿತು.
ಬಳಿಕ ತಾಲೂಕು ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಆಡಳಿತಾಧಿಕಾರಿ ಜಗನ್ನಾಥ ಮೂರ್ತಿ, ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಅಧಿಕಾರಿಗಳು ಜವಾಬ್ದಾರಿ ವಹಿಸಿ ಸಕಾಲಕ್ಕೆ ಸಾರ್ವಜನಿಕರ ಕೆಲಸಗಳು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಕೆಲ ಇಲಾಖೆ ಅಧಿಕಾರಿಗಳು ಸಕಾಲಕ್ಕೆ ಕೆಲಸ ಮಾಡದಿರುವುದು ಕಂಡು ಬರುತ್ತಿದೆ. ಕುಡಲೇ ಅದನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಸಿಡಿಪಿಒ ಇಮಲಪ್ಪ ಮಾತನಾಡಿ, ತಾಲೂಕಿನಲ್ಲಿ ಒಟ್ಟು 351 ಅಂಗನವಾಡಿಗಳಿದ್ದು, ಈ ಪೈಕಿ 284 ಅಂಗನವಾಡಿ ಸ್ವಂತ ಕಟ್ಟಡದಲ್ಲಿವೆ. 17 ಶಾಲಾ ಆವರಣದಲ್ಲಿ, 3 ಬೇರೆ ಕಚೇರಿಗಳಲ್ಲಿ, 1 ಸಮುದಾಯ ಭವನದಲ್ಲಿ, ಪಟ್ಟಣದಲ್ಲಿ 1 ಬಾಡಿಗೆಯಲ್ಲಿ ನಡೆಯುತ್ತಿದೆ ಎಂದರು.
ಗ್ರಾಮೀಣ ಭಾಗಕ್ಕೆ ಅಂಗನವಾಡಿ ಬಾಡಿಗೆ ದರ ಎಷ್ಟಿದೆ ಎಂದು ಪ್ರಭಾರಿ ತಾಪಂ ಇಒ ಶಿವಕುಮಾರ ಘಾಟೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಡಿಪಿಒ ಗ್ರಾಮೀಣ ಭಾಗದಲ್ಲಿ 1500 ರೂ. ಪಟ್ಟಣದಲ್ಲಿ 3000 ಸಾವಿರ ರೂ. ನಿಗದಿಯಾಗಿದೆ. ಅಲ್ಲದೇ ಹೊಸದಾಗಿ ತೆರೆದ 39 ಅಂಗನವಾಡಿ ಕೇಂದ್ರಗಳು ಸದ್ಯ ಬಾಡಿಗೆಯಲ್ಲಿವೆ ಎಂದರು.
ಅಂಗನವಾಡಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲ ಎಂದು ಮಾಹಿತಿ ನೀಡಿದರೇ ಇದಕ್ಕೆ ಸ್ಪಂದಿಸಿದ ಆಡಳಿತಾಧಿಕಾರಿ ಜಗನ್ನಾಥ ಮೂರ್ತಿ ಜೆಸ್ಕಾಂ ಎಇಇ ರವಿಕುಮಾರ ಅವರಿಗೆ ಸಂಪರ್ಕ ಪಡೆಯಲು ಇರುವ ನಿಯಮ ಪ್ರಶ್ನಿಸಿದರು. 3500 ರೂ. ಕಟ್ಟುವ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ. ನಂತರ ಇಲಾಖೆಯಿಂದ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ ಎಂದರು.
ಎಇಇ ವೆಂಕಟ ಶಿಂಧೆ ಮಾತನಾಡಿ, ವಡಗಾಂವ (ದೇ), ಸೋರಳ್ಳಿ, ಕಮಲನಗರ ಸೇರಿದಂತೆ ಕೆಲ ಗ್ರಾಮದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದರು. ಕಾಮಗಾರಿಯ ಗುಣಮಟ್ಟ ಕಾಪಾಡುವಂತೆ ಜಗನ್ನಾಥ ಮೂರ್ತಿ ಸೂಚಿಸಿದರು.
ಬಿಸಿಎಂ ತಾಲೂಕು ಅಧಿಕಾರಿ ರವೀಂದ್ರ ಮಾತನಾಡಿ, ಇಲಾಖೆಯ ವಸತಿ ನಿಲಯದ ಬಗ್ಗೆ ಮಾಹಿತಿ ನೀಡಿದರು. ಜೆಸ್ಕಾಂ ಎಇಇ ರವಿಕುಮಾರ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ 48459 ಫಲಾನುಭವಿಗಳಿದ್ದು, 35 ಸಾವಿರಕ್ಕೂ ಅಧಿಕ ಫಲಾನುಭವಿಗಳ ಶೂನ್ಯ ಬಿಲ್ ಬಂದಿದೆ ಎಂದರು.
ಮೀನುಗಾರಿಕೆ ಇಲಾಖೆಯಿಂದ 29 ಕೆರೆಗಳು ಸ್ವ ಸಹಾಯ ಸಂಘಗಳಿಗೆ ಮತ್ತು ಟೆಂಡರ್ ಮೂಲಕ ನೀಡಲಾಗಿದೆ. ಇದರಲ್ಲಿ ಮೀನುಗಳು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. 40 ಹೆಕ್ಟೇರ್ ಪ್ರದೇಶ ಕೆಳಗಿರುವ ಕೆರೆಗಳು ಗ್ರಾಪಂ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದರು.
ಬಿಇಒ ಸುಧಾರಾಣಿ ಮಾತನಾಡಿ, ತಾಲೂಕಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ 150, ಪ್ರೌಡ ಶಾಲೆಯಲ್ಲಿ 108 ಶಿಕ್ಷಕರ ಹುದ್ದೆಗಳು ಖಾಲಿಯಿವೆ. ತಾತ್ಕಾಲಿಕವಾಗಿ ಪ್ರಾಥಮಿಕ ಶಾಲೆಗಳಲ್ಲಿ 147, ಪ್ರೌಢ ಶಾಲೆಗಳಲ್ಲಿ 42 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೌಠಾ, ಕೌಡಗಾಂವ ಶಾಲೆಯಲ್ಲಿ ಶೌಚಾಲಯವಿಲ್ಲ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಗಮನಕ್ಕೆ ತಂದರು. ಶೀಘ್ರವಾಗಿ ಶೌಚಾಲಯ ಸಮಸ್ಯೆ ಬಗೆಹರಿಸುವಂತೆ ಪ್ರಭಾರಿ ಇಒ ಶಿವಕುಮಾರ ಘಾಟೆ ಅವರಿಗೆ ತಿಳಿಸಿದರು.
ಬಿಸಿಯೂಟ ಸಹಾಯಕ ನಿರ್ದೇಶಕ ಇನಾಯತ್ ಅಲೀ ಮಾತನಾಡಿ, ತಾಲೂಕಿನಲ್ಲಿ ಒಟ್ಟು 352 ಅಡುಗೆ ಕೇಂದ್ರಗಳಿವೆ. ಕೆಲವೆಡೆ ಶಿಥಿಲಾವಸ್ಥೆಯಲ್ಲಿವೆ ಎಂದರು. ಈ ವೇಳೆ ನಾನಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.