ಗುಡ್ಡದಹಟ್ಟಿ ಗ್ರಾಮಕ್ಕೆ ಬಸ್ – ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೯: ಮಾಯಕೊಂಡ ಕ್ಷೇತ್ರದಲ್ಲಿರುವ ಗುಡ್ಡದಹಟ್ಟಿ (ಶ್ರೀ ರಂಗಯ್ಯನಮಟ್ಟಿ) ಗ್ರಾಮಕ್ಕೆ ಬಸ್ ಕಲ್ಪಿಸಲು ಈಗಾಗಲೇ ಸುಮಾರು ಅರ್ಜಿಗಳನ್ನು ಸಲ್ಲಿಸಿದ್ದರೂ ಸಹ ಕ್ರಮ ಕೈಗೊಂಡಿಲ್ಲ. ಹಾಗೂ ನಮ್ಮ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎಂದು ಡಾ. ಎನ್. ಮೂರ್ತಿ ಸ್ಥಾಪಿತ ದಲಿತ ಸಂಘರ್ಷ ಸಮಿತಿ ವತಿಯಿಂದ ಆರೋಪಿಸಲಾಯಿತು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ ಎ. ಮಂಜುನಾಥ್,  2016 ರಿಂದ ಇಲ್ಲಿಯವರೆಗೂ ಗುಡ್ಡದಹಟ್ಟಿ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಇಲ್ಲದಿರುವುದರ ಬಗ್ಗೆ ಹಾಗೂ ಹಲವಾರು ಬಾರಿ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿರುತ್ತೇವೆ. ಇದುವರೆಗೂ ಅವರಿಂದ ಯಾವುದೇ ಹಿಂಬರಹವಾಗಲೀ ಅಥವಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವುದಾಗಲೀ ನಡೆದಿರುವುದಿಲ್ಲ ಎಂದರು.ಗ್ರಾಮದಿಂದ ಶಾಲಾ-ಕಾಲೇಜ್, ಉದ್ಯೋಗಕ್ಕಾಗಿ, ಹಿರಿಯ ನಾಗರೀಕರ ಆರೋಗ್ಯ ಸಮಸ್ಯೆಗೆ ದಾವಣಗೆರೆ ಜಿಲ್ಲೆಗೆ ಹೋಗಿ ಬರಲು ತುಂಬಾ ತೊಂದರೆ ಯುಂಟಾಗುತ್ತಿದ್ದು, ಈಗಿರುವ ಬಸ್ ನಿಲ್ದಾಣಕ್ಕೆ ಹೋಗಲು ಸುಮಾರು 3 ರಿಂದ 4 ಕಿ.ಮೀ. ದೂರದಷ್ಟು ಗುಡ್ಡಗಾಡು ಪ್ರದೇಶದಲ್ಲಿ ಕಾಲು ನಡಿಗೆಯಲ್ಲೇ ಹೋಗಬೇಕಾಗಿರುತ್ತದೆ. ಇದರಿಂದ ಹಿರಿಯ ನಾಗರೀಕರಿಗೆ ಮತ್ತು ಮಕ್ಕಳಿಗೆ ತುಂಬಾ ತೊಂದರೆಯುಂಟಾಗುತ್ತಿದೆ. ಹಾಗೂ ಗ್ರಾಮಕ್ಕೆ ಸಲ್ಲಬೇಕಾದ ಮೂಲಭೂತ ಸೌಕರ್ಯ ದಿಂದಲೂ ವಂಚಿತಗೊಂಡಿದ್ದು, ಕುಡಿಯುವ ನೀರು, ಒಳಚರಂಡಿ, ರಸ್ತೆ ಸೇರಿದಂತೆ ಹಲವು ಬಗೆಯ ಸಮಸ್ಯೆಗಳಿಂದ ಗ್ರಾಮಸ್ಥರು ತೊಂದರೆಗೀಡಾಗಿದ್ದಾರೆ ಎಂದರು.ಸ್ಥಳೀಯ ಸರ್ಕಾರಿ ಶಾಲೆಯ ಪರಿಸ್ಥಿತಿಯಂತೂ ಈಗಲೋ ಆಗಲೋ ಬೀಳುವ ಪರಿಸ್ಥಿತಿಯಲ್ಲಿದ್ದು, ಮೇಲ್ಬಾವಣೆ ಈಗಾಗಲೇ ಬಿದ್ದು, ಪ್ಲಾಸ್ಟಿಕ್ ಶೀಟ್ ಹೊದಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಈ ಸಂಬಂಧವಾಗಿ ಯಾವುದೇ ಅಧಿಕಾರಿಗಳು ಬಗ್ಗೆ ಗಮನ ವಹಿಸಿ ಕ್ರಮಕೈಗೊಂಡಿರುವುದಿಲ್ಲ. ಗುಡ್ಡದಹಟ್ಟಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ, ಮೂಲಭೂತ ಸೌಕರ್ಯ ಹಾಗೂ ವ್ಯವಸ್ಥಿತ ಶಿಕ್ಷಣ ಸೇರಿದಂತೆ ಹಲವು ಬಗೆಯ ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣವೇ ಕ್ರಮ ಕೈಗೊಂಡು ಇದಕ್ಕೆ ಸಂಬಂಧಪಟ್ಟಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು. 15 ದಿನಗಳೊಳಗೆ ನಮ್ಮ ಸಮಸ್ಯೆಗಳನ್ನು ಪರಿಹರಿಸ ದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ, ರಮೇಶ್, ಬೇತೂರು ಭರತ್, ಹರೀಶ್ ಅಜ್ಜಂಪುರ, ರೇವಣ್ಣ, ವೆಂಕಿ ಬಾಯಿ, ಹನುಮಂತಪ್ಪ ಹಾಜರಿದ್ದರು.