ರಾಷ್ಟ್ರೀಯ ಕ್ರೀಡಾ ದಿನ ಆಚರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ,29- ದೇಶದ ಯುವಕರನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಮತ್ತು ಕ್ರೀಡಾಪಟುಗಳನ್ನು ಮುಖ್ಯವಾಹಿನಿಗೆ ಕರೆತರಲು ರಾಷ್ಟ್ರೀಯ ಕ್ರೀಡಾದಿನವನ್ನು ದೇಶದಾದ್ಯಂತ ಆಚರಣೆ ಮಾಡಲಾಗುತ್ತದೆ ಎಂದು ಕುಲಪತಿಗಳಾದ ಪ್ರೊ. ಎಂ ಮುನಿರಾಜು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಮತ್ತು ಕ್ರೀಡಾ ವಿಜ್ಞಾನ ವಿಭಾಗವು ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಖೊ-ಖೊ ಪಂದ್ಯಾವಳಿಯನ್ನು ಸಸಿಗೆ ನೀರುಣಿಸುವ ಮತ್ತು ಮೇಜರ್ ಧ್ಯಾನ್‍ಚಂದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ನಮ್ಮನ್ನು ನಾವು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಾಗಿರುವಂತೆ ಮಾಡುತ್ತವೆ. ನಮ್ಮಲ್ಲಿರುವ ಹಿಂಜರಿಕೆಯನ್ನು ಬಿಟ್ಟು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸ್ಫರ್ಧಾ ಮನೋಭಾವ ತೋರಿಸಬೇಕು ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ್ದ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿಗಳಾದ ಡಾ. ಕುಮಾರ್ ಮಾತನಾಡಿ, ಸಮಾಜ ವಿಜ್ಞಾನ ನಿಕಾಯದ ವಿಭಾಗಗಳಿಗೆ ಸ್ವಂತ ಕಟ್ಟಡದ ಕೊರತೆಯಿದ್ದು, ಇದನ್ನು ಒದಗಿಸಿಕೊಟ್ಟಲ್ಲಿ ನಿಕಾಯದ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಲು ಒಂದೆಡೆಯೆ ಅನುಕೂಲ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕುಲಪತಿಗಳು ಚಿಂತನೆ ನಡೆಸಬೇಕು ಎಂದು ಹೇಳಿದರು.
ಮೇಜರ್ ಧ್ಯಾನ್ಚಂದ್ ಸ್ಮರಣಾರ್ಥ ಆಯೋಜಿಸಿದ್ದ ಖೊ-ಖೊ ಪಂದ್ಯಾವಳಿಯಲ್ಲಿ ವಿಜೇತರಾದ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕುಲಪತಿಗಳು ಟ್ರೋಫಿಯನ್ನು ವಿತರಿಸಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಂಪತ್ ಕುಮಾರ, ಅತಿಥಿ ಉಪನ್ಯಾಸಕರಾದ ಮಹೇಶ, ರಾಜೇಶ ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥರಾದ ಡಾ. ಶಶಿಧರ ಕೆಲ್ಲೂರ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಶಿವಪುತ್ರ ನಿರೂಪಿಸಿದರು. ನಾಗರಾಜ ವಂದಿಸಿದರು. ಸಂಶೋಧನಾ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.