ಗೌರಿ ಗಣೇಶ-ಈದ್ ಮಿಲಾದ್ ಸೌಹಾರ್ದತೆ ಸಂಕೇತವಾಗಲಿ: ಸಿಪಿಐ ಜಗದೇವಪ್ಪ ಪಾಳಾ
ಕಾಳಗಿ:ಆ.29: ಪಿಒಪಿ ಹಾಗೂ ರಾಸಾಯನಿಕ ಮಿಶ್ರಿತ ಗಣೇಶ ಮೂರ್ತಿ ಪ್ರತಿಷ್ಠಾಪಿಸದೆ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ಸ್ಥಾಪಿಸುವುದರ ಜತೆಗೆ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಹಶಿಲ್ದಾರ ಘಮಾವತಿ ರಾಠೋಡ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಗಣೇಶ ಹಾಗೂ ಇದ್ ಮಿಲಾದ್ ಹಬ್ಬದ ಪೂರ್ವ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸೆ.7ರಿಂದ ಪ್ರಾರಂಭವಾಗುವ ಗೌರಿ ಗಣೇಶ ಹಬ್ಬ ಹಾಗೂ ಸೆ.16ರಂದು ಬರುವ ಇದ್ ಮಿಲಾದ್ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ಶಾಂತಿಯುತವಾಗಿ ಆಚರಣೆ ಮಾಡಬೇಕು ಎಂದು ಹೇಳಿದರು.
ಗಣೇಶ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಸಂಭ್ರಮದಿಂದ ಹಬ್ಬ ಆಚರಿಸಬೇಕು ಎಂದು ವಿವಿಧ ಸಂಘ ಹಾಗೂ ಗಣೇಶ ಮಂಡಳಿ ಪ್ರತಿನಿಧಿಗಳಿಗೆ ಮನವಿ ಮಾಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳಿಂದ ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಪರವಾನಿಗೆ ಕುರಿತು ಏಕಗವಾಕ್ಷಿ ವ್ಯವಸ್ಥೆಯನ್ನು ಪಟ್ಟಣ ಪೆÇಲೀಸ್ ಠಾಣೆ ಮತ್ತು ಗ್ರಾಪಂ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಸರ್ಕಾರದ ನಿಯಮದಂತೆ ಪರವಾನಿಗೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಳಗಿ ಸಿಪಿಐ ಜಗದೇವಪ್ಪ ಪಾಳ ಮಾತನಾಡಿ, ಹಬ್ಬಗಳನ್ನು ಸಂಪ್ರದಾಯದಂತೆ ಆಚರಿಸಬೇಕು. ಗಣೇಶೋತ್ಸವ ಮತ್ತು ಈದ್ ಮಿಲಾದ್ ಶಾಂತಿ, ಸೌರ್ಹಾರ್ದದಿಂದ ನಡೆಸಬೇಕು. ಶಾಂತಿಗೆ ಭಂಗ ತಂದು ಪೆÇಲೀಸರಿಗೆ ಕೆಲಸ ನೀಡಬೇಡಿ ಎಂದು ಹೇಳಿದರು.
ಪರಿಸರಕ್ಕೆ ಹಾನಿಕಾರಕ ಪಿಒಪಿ ಗಣೇಶ ಮೂರ್ತಿಗಳು ಬಳಸಬಾರದು. ಪರಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಕಂಡುಬಂದಲ್ಲಿ ಅವುಗಳನ್ನು ಸೀಜ್ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಪೆÇಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಯಾವುದೇ ಹೊಸ ನಿಬರ್ಂಧಗಳನ್ನು ಹೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಾನೂನು ಪಾಲನೆ ಹಾಗೂ ಶಾಂತಿಯುತವಾಗಿ ಹಬ್ಬ ಆಚರಿಸಲು ಪೆÇಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಬಳಕೆ ನಿಷೇಧಿಸಲಾಗಿದೆ. ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸಂಘಟಕರಿಗೆ ಸೂಚಿಸಿದರು.
ಪಪಂ. ಮುಖ್ಯಾಧಿಕಾರಿ ಪಂಕಜಾ ಎ. ಮಾತನಾಡಿ ಗೌರಿ ಗಣೇಶ ಹಬ್ಬವನ್ನು ಕಾನೂನಿನ ಚೌಕಟ್ಟಿನಲ್ಲಿ ಶಾಂತಿ ಸೌಹಾರ್ದಯುತವಾಗಿ ಆಚರಿಸಿ.
ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ, ವಿದ್ಯುತ್ ಅಳವಡಿಸಲಾಗುವುದು. ರೌದ್ರಾವತಿ ನದಿಯ ನೂತನ ಬ್ರಿಡ್ಜ್ ಕಂ ಬ್ಯಾರೆಜ್ ನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಸ್ಥಳ ನಿಗದಿ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್:
ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ಬಹುತೇಕ ಅಧಿಕಾರಿಗಳು ಗೈರಾಗಿದಕ್ಕೆ ಆಕ್ರೋಶಗೊಂಡ ತಹಶಿಲ್ದಾರ ಘಮಾವತಿ ರಾಠೋಡ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಆದೇಶ ಮಾಡಿದರು.
ಪಿಎಸ್‍ಐ ತಿಮ್ಮಯ್ಯ ಬಿ.ಕೆ, ಚಿತ್ತಾಪುರ ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ ಎ.ಎನ್. ನಿವೃತ್ತ ಶಿಕ್ಷಕ ಗುಡುಸಾಬ ಕಮಲಾಪೂರ ಮಾತನಾಡಿದರು.
ಮುಖಂಡರಾದ ಶಿವಶರಣಪ್ಪ ಕಮಲಾಪೂರ, ಜಗನ್ನಾಥ ಚಂದನಕೇರಿ, ಗೌರಿಶಂಕರ ಗುತ್ತೇದಾರ, ದತ್ತು ಗುತ್ತೇದಾರ, ಸಂತೋಷ ನರನಾಳ, ಶ್ರೀನಿವಾಸ ಗುರಮಿಠಕಲ್, ಈರಣ್ಣಗೌಡ ಟೆಂಗಳಿಕರ್, ಅನೀಲಕುಮಾರ ಗುತ್ತೇದಾರ, ಇಬ್ರಾಹಿಂ ಶಾ, ದೀಲಿಪ ಭರತನೂರ, ಚಿತ್ರಶೇಖರ ದಂಡೋತಿಕರ್, ಮನೋಹರ ಜಾಧವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.