ದಸರಾಗೂ ಮುನ್ನವೇ ಸಿಎಂ ರಾಜೀನಾಮೆ ಕೊಡಲಿ
ಸಂಜೆವಾಣಿ ನ್ಯೂಸ್
ಮೈಸೂರು: ಅ.03:- ನಿಮ್ಮ 40 ವರ್ಷದ ರಾಜಕೀಯ ಗೌರವ ಉಳಿಯಲು ಮುಡಾ ಹಗರಣದಲ್ಲಿ ನಿಷ್ಪಕ್ಷವಾದ ತನಿಖೆ ಆಗಬೇಕೆಂದು ಸಿಎಂ ಸಿದ್ದರಾಮಯ್ಯ ಭಾವಿಸಿದ್ದರೆ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸದೇ ರಾಜೀನಾಮೆ ನೀಡಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಒತ್ತಾಯಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನೈತಿಕತೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಸಿಎಂ ಮಾತನಾಡುತ್ತಾರೆ. ದಸರಾದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೇ ರಾಜೀನಾಮೆ ನೀಡಿ ತನಿಖೆಗೆ ಹೋದರೆ ಸಿದ್ದರಾಮಯ್ಯ ಗೌರವ ಉಳಿಯುತ್ತದೆಂದರು.
ಬಹಳ ಯಶಸ್ವಿಯಾಗಿ ದಸರೆ ನಡೆಯಲಿ ಅಂತಾ ಪ್ರಾರ್ಥನೆ ಮಾಡುತ್ತೇನೆ. ರಾಜ್ಯ ಸರ್ಕಾರ ಪೂರ್ಣ ಪುಟದ ಜಾಹೀರಾತಿನಲ್ಲಿ ‘ಸತ್ಯಕ್ಕಾಗಿ ಹೋರಾಟ, ಗಾಂಧಿ ಕಲಿಸಿದ ಪಾಠ’ ಎಂಬ ಹೇಳಿಕೆ ನೀಡಿದೆ. ಅದರಂತೆಯೇ ಬಿಜೆಪಿ ರಾಜ್ಯ ಸರ್ಕಾರ ಮಾಡಿರುವ ಹಗರಣದ ವಿರುದ್ಧ ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಈ ಸತ್ಯಕ್ಕೆ ಜಯ ಸಿಗುವ ವಿಶ್ವಾಸವಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಸ್ಸಿ ಎಸ್ಟಿ ಅನುದಾನವನ್ನು ಬಳಕೆ ಮಾಡಿಕೊಂಡು ಐದು ಗ್ಯಾರಂಟಿ ಜಾರಿ ಮಾಡಲು ಮುಗ್ಗರಿಸಿ ಬೀಳದ ರೀತಿ ಸಹಾಯ ಪಡೆದುಕೊಳ್ಳುತ್ತಿದೆ. ಕಳೆದ ವರ್ಷ 11140 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದ್ದರು. ಇದರ ವಿರುದ್ಧ ದೊಡ್ಡ ಹೋರಾಟ ಮಾಡಿದ್ದೆವು. ಈ ಸಾಲಿನಲ್ಲಿ 14400 ಕೋಟಿ ರೂ. ಹಣವನ್ನು 26 ಸಾವಿರ ಕೋಟಿ ದಲಿತರ ಹಣವನ್ನು ಗ್ಯಾರಂಟಿ ಗಳಿಗೆ ಬಳಸಿದ್ದಾರೆ. ಇದರಿಂದ ಎಸ್ಸಿ ಎಸ್ಟಿಯ ಆರು ನಿಗಮಗಳು ಮೂಲೆಗುಂಪಾಗಿವೆ. ಒಂದೂವರೆ ಕೋಟಿ ಜನರಿಗೆ ಆರ್ಥಿಕ ಸವಲತ್ತಿಗಾಗಿ ಕೇವಲ 510 ಕೋಟಿ ನೀಡಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಭೂ ಖರೀದಿ ಯೋಜನೆಗೆ ಬಿಜೆಪಿ ಅವಧಿಯಲ್ಲಿ ಜಿಲ್ಲಾಧಿಕಾರಿ ಯಿಂದ ಅನುಮತಿ ಪಡೆದಿರುವ ಬಾಕಿ ಹಣ 1800 ಕೋಟಿ ರೂ. ಹಣ ಬಿಡುಗಡೆಯೇ ಆಗಿಲ್ಲ. ಇಡೀ ವರ್ಷದ ಆರು ನಿಗಮಗಳಿಗೆ 510 ಕೋಟಿಗಷ್ಟೇ ಸೀಮಿತಗೊಳಿಸಿ ಅನ್ಯಾಯವೆಸಗಿದೆ ಎಂದರು.
ಮತ್ತೊಂದೆಡೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 187 ಕೋಟಿ ಹಣವನ್ನು ಖಾಸಗಿ ಖಾತೆಗೆ ವರ್ಗಾವಣೆ ಮಾಡಿರುವ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಬಳಿಕ ಖುದ್ ಸಿದ್ದರಾಮಯ್ಯ 87 ಕೋಟಿ ಎಂದು ಒಪ್ಪಿಕೊಂಡಿದ್ದಾರೆ. ಇಡಿ ತಂಡ ಸಂಪೂರ್ಣ ಹಗರಣದ ತನಿಖೆ ನಡೆಸುತ್ತಿದೆ. ಸಚಿವರು ಇಂದಿಗೂ ಜೈಲಿನಲ್ಲಿದ್ದಾರೆ. ಆದರೆ, ಆರ್ಥಿಕ ಇಲಾಖೆ ಹೊಣೆ ಹೊತ್ತ ಸಿಎಂ ಮಾತ್ರ ಎಣ್ಣೆ ಸವರಿಕೊಂಡು ನನಗೆ ಸಂಬಂಧ ಇಲ್ಲವೆಂಬಂತೆ ಇದ್ದಾರೆಂದು ಲೇವಡಿ ಮಾಡಿದರು.
ಈ ನಡುವೆ ನಿನ್ನೆಯಿಂದ ಮುಡಾ ಹಗರಣ ತಿರುವು ಪಡೆದುಕೊಂಡಿದೆ. ಮೂರು ತಿಂಗಳ ಹಿಂದೆ 14 ನಿವೇಶನ ಮರಳಿ ನೀಡುವುದಾದರೆ 67 ಕೋಟಿ ರೂ. ನೀಡುವಂತೆ ಸಿಎಂ ಕೇಳಿದ್ದರು. ಇದಾದ ಬಳಿಕ ರಾಜ್ಯಪಾಲರ ಮೂಲಕ ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ವಿಚಾರಣೆ ನಡೆದು ತಪ್ಪಿತಸ್ಥರೆಂದು ಪರಿಗಣಿಸಿ ತನಿಖೆಗೂ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದರೆ ನೀವು ರಾಜೀನಾಮೆ ಕೊಡಿ ಎಂದರು.
ನಿನ್ನೆಯಿಂದ ಆತ್ಮಸಾಕ್ಷಿ ಅನುಸಾರ ನಾನು ತಪ್ಪು ಮಾಡಿಲ್ಲ ಎನ್ನುವ ವಕೀಲರಾದ ಸಿಎಂಗೆ ಆತ್ಮಸಾಕ್ಷಿಯ ತನಿಖೆ ಮಾಡಲು ಸಾಧ್ಯವಿದೆಯೇ? ಈ ಬಗ್ಗೆ ವಕೀಲರಾಗಿ ಹೇಳಬೇಕಿದೆ. ಇನ್ನೂ ಮುಡಾ ಅಧಿಕಾರಿಗಳು ಅವರ ಮನೆಗೆ ಹೋಗಿ ಸಹಿ ಮಾಡಿಸಿಕೊಂಡು ಒಂದೇ ದಿನದಲ್ಲಿ ವಾಪಾಸ್ ತೆಗೆದುಕೊಳ್ಳುವ ಪ್ರಕ್ರಿಯೆ ಮಾಡಿದ್ದಾರೆ. ಇದಕ್ಕೂ ಕಾನೂನಿನಲ್ಲಿ ಅವಕಾಶ ಇದೆಯೋ ಇಲ್ಲವೋ ಅರಿಯಬೇಕಿದೆ ಎಂದು ಹೇಳಿದರು.
2011ರಲ್ಲಿ ನೀವೇ ಯಡಿಯೂರಪ್ಪ ಅವರಿಗೆ ಹೇಳಿದ ಮಾತು ಈಗ ನಿಮಗೇ ಹೇಳಬೇಕಾಗಿದೆ. ತಪ್ಪಿತಸ್ಥ ಸ್ಥಾನದಿಂದ ಆಚೆ ಬರಬಂದೂ ನೀವೇ ಸಿಎಂ ಆಗಿ ನಮ್ಮ ಅಭ್ಯಂತರವಿಲ್ಲ. ಹೀಗಾಗಿ ಪಕ್ಷದ ಒತ್ತಾಯ ಎನೆಂದರೆ ಸತ್ಯ ಹೊರಬರಲಿ. ನ್ಯಾಯಾಲಯದ ಅಭಿಪ್ರಾಯದ ಪ್ರಕಾರ ನೀವು ವಿರೋಧ ಪಕ್ಷದ ಅಧಿಕಾರದಲ್ಲಿರುವ ಪ್ರಭಾವ ಬಳಸಿರುವ ಕಾನೂನು ಉಲ್ಲಂಘನೆ ಬಗ್ಗೆ ಉಲ್ಲೇಕಿಸಿದೆ. ಹೀಗಾಗಿ ನೀವು ರಾಜೀನಾಮೆ ನೀಡಿ.ಇಲ್ಲದಿದ್ದರೆ ಜನರೇ ನಿಮ್ಮ ವ್ಯವಸ್ಥೆ ನೋಡಲಿದ್ದಾರೆಂದರು.
ತೇಜೋವಧೆ ಮಾಡಿರುವುದೆಲ್ಲಿ: ಸಿದ್ದರಾಮಯ್ಯ ಪತಿಯ ತೇಜೋವಧೆಗೆ ಬೇಸತ್ತು ನಿವೇಶನ ಹಿಂದುರುಗಿಸಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಪ್ರಕರಣ ವಿಚಾರಣಯಲ್ಲಿ ಎಲ್ಲಿ ತೇಜೋವಧೆ ಹೇಗೆ ಆಗುತ್ತದೆ. ನಿವೇಶನ ಪಡೆಯುವಲ್ಲಿ ತಪ್ಪೇ ಮಾಡಿಲ್ಲ ಎಂದರೆ ವಾಪಾಸ್ ಯಾಕೆ ಕೊಟ್ಟರೆಂದು ಪ್ರಶ್ನಿಸಿದರು.
ಇನ್ನೂ ಗೃಹ ಸಚಿವ ಡಾ.ಜಿ.ಪರಮೇಶ್ವರದ ಅವರು ನಿನ್ನೆ ಸಿಎಂ ಪತ್ನಿ ನಿವೇಶನ ಹಿಂದಿರುಗಿಸಿರುವುದು ಒಳ್ಳೆಯ ನಿಲುವುದು, ಮುಂದೆ ಎನಾಗುವುದೋ ಗೊತ್ತಿಲ್ಲವೆಂದಿದ್ದಾರೆ. ಆದರೆ ನಿಜಕ್ಕೂ ಅವರಿಗೆ ಎನಾಗಿದೆ, ಮುಂದೆ ಎನಾಗಲಿದೆ ಎಂಬುದು ಗೊತ್ತಿರುವಂತಿದೆ ಎಂದರು.
ಶಾಸಕ ಶ್ರೀವತ್ಸ ಮಾತನಾಡಿ, ನಾವು ಸಿಎಂ ನಿವೇಶನ ನಮ್ಮ ಗುರಿಯಲ್ಲ. ಆದರೆ, ನಾಗರಾಜು, ಶಾಂತಮ್ಮ ಮೊದಲಾದವರ ಪ್ರಕರಣದಿಂದ 4879 ನಿವೇಶನ 37 ತಿಂಗಳಲ್ಲಿ ಹಂಚಿಕೆ ಆಗಿದೆ. ಕೇವಲ ಸಿಎಂ ಅವರ 14 ನಿವೇಶನ ಉದಾಹರಣೆ ಇಟ್ಟುಕೊಂಡು ಉಳಿದವರು ಬಚಾವ್ ಆಗಲು ಹೊರಟಿದ್ದಾರೆ. ಆದರೆ, ನಮಗೆ ಸಮಗ್ರ ತನಿಖೆ ಆಗಬೇಕು. ಲೋಕಾಯುಕ್ತ, ಎಡಿಜಿಪಿಗೆ ದೂರು ನೀಡಿದ್ದಿವಿ. ಇದುವರೆವಿಗೂ ಎಲ್ಲಾ ತಪ್ಪು ಸರ್ಕಾರ ಒಪ್ಪಿಕೊಂಡಿದೆ. ಸಿಎಂ ಇಡೀ ಪ್ರಕರಣದಿಂದ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಮುಜುಗರ ಮಾಡಿದ್ದಾರೆ. ನಿನ್ನೆ ಒಂದೇ ದಿನಕ್ಕೆ ನಿವೇಶನ ಮರಳಿ ಪಡೆದು ಅದರ ಖಾತೆ ರದ್ದು ಮಾಡಿದ್ದಾರೆ. ಇದರ ಮುಂದಿನ ಹೋರಾಟ ಸಂಬಂಧ ಕಾನೂನು ತಜ್ಞರ ಜತೆ ಚರ್ಚಿಸಿ ತೀರ್ಮಾನಿಸುತ್ತೇವೆ. ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಸಹ ಆಗಿಲ್ಲ. ಜತೆಗೆ, ಈಗಲಾದರೂ ಸಿಎಂ ರಾಜೀನಾಮೆ ಕೊಡಿ ಎಂಬುದೆ ನಮ್ಮ ಆಗ್ರಹ. ಸದ್ಯ ಇಡಿ ಪ್ರಕರಣ ದಾಖಲಿಸಿದ್ದು, ಮುಂದೆ ಅವರೇ ಸಂಪೂರ್ಣ ತನಿಖೆ ಕೈಗೊಳ್ಳಲಿ ಎಂಬುದು ನಮ್ಮ ಒತ್ತಾಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ನಗರಾಧ್ಯಕ್ಷ ಎಲ್.ನಾಗೇಂದ್ರ, ನಗರ ಕಾರ್ಯದರ್ಶಿ ಕೇಬಲ್ ಮಹೇಶ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಪರಮಾನಂದ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಮಾದ್ಯಮ ವಕ್ತಾರ ಮಹೇಶ್ ರಾಜೇ ಅರಸ್ ಇನ್ನಿತರರು ಉಪಸ್ಥಿತರಿದ್ದರು.