ಬಾಪೂಜಿ ಪ್ರಬಂಧ ಸ್ಪರ್ಧೆ:ಒಂಭತ್ತು ಜನ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ವಿತರಣೆ
ಕಲಬುರಗಿ:ಅ.2: ಮಹಾತ್ಮ ಗಾಂಧೀಜಿ ಅವರ 155 ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿದ್ಯಾರ್ಥಿ, ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪøಶ್ಯತೆ ನಿವಾರಣೆಗೆ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ಶಾಲಾ-ಕಾಲೇಜುಗಳ ಮಕ್ಕಳಿಗೆ ಆಯೋಜಿಸಿದ ಪ್ರಬಂಧ ಸ್ಪರ್ಧೇಯಲ್ಲಿ ವಿಜೇತರಾದ 9 ಜನ ವಿದ್ಯಾರ್ಥಿಗಳಿಗೆ ಬುಧವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜರುಗಿದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು.
ಪ್ರೌಢ ಶಾಲೆ ವಿಭಾಗದಿಂದ ವಿಜೇತರಾದ ಕಲಬುರಗಿ ತಾಲೂಕಿನ ಭೀಮಳ್ಳಿ ಆದರ್ಶ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಅವರಿಗೆ ಪ್ರಥಮ, ಕಲಬುರಗಿಯಯ ಓಕಳಿ ಮಂದಿರ ಕನ್ನಡ ಕಾನ್ವೆಂಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ರಕ್ಷಿತಾ ಅವರಿಗೆ ದ್ವಿತೀಯ ಹಾಗೂ ಸೇಡಂ ಸರ್ಕಾರಿ ಕನ್ಯಾ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪೂಜಾ ಅವರಿಗೆ ತೃತೀಯ ಸ್ಥಾನದ ಬಹುಮಾನ ನೀಡಲಾಯಿತು.
ಪದವಿ ಪೂರ್ವ ವಿಭಾಗದಿಂದ ಸೇಡಂ ಪಟ್ಟಣದ ನರ್ಮದಾದೇವಿ ಗಿಲ್ಡಾ ಪದವಿ ಪೂರ್ವ ಕಾಲೇಜಿನ ದ್ವಿ.ತೀಯ ಪಿ.ಯು.ಸಿ ವಿದ್ಯಾರ್ಥಿನಿ ವನಿತಾ ಅವರಿಗೆ ಪ್ರಥಮ, ಕಲಬುರಗಿಯ ಬಿ.ಬಿ.ರಜಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಸೈದಾ ಅಂಜುಂ ಅವರಿಗೆ ದ್ವಿತೀಯ ಹಾಗೂ ಸೇಡಂ ಪಟ್ಟಣದ ಮಾತೃ ಛಾಯಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ಅಶೋಕ ಅವರಿಗೆ ತೃತೀಯ ಸ್ಥಾನದ ಬಹುಮಾನ ನೀಡಿ ಸತ್ಕರಿಸಲಾಯಿತು.
ಅದೇ ರೀತಿ ಪದವಿ-ಸ್ನಾತಕೋತ್ತರ ವಿಭಾಗದಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಎಂ.ಎ. (ಇತಿಹಾಸ) ವಿಭಾಗದ ಭೂತಾಳಿ ತೆಲ್ಲೂರ ಅವರಿಗೆ ಪ್ರಥಮ, ಕಲಬುರಗಿಯ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ ಅಭ್ಯರ್ಥಿ ಸಹನಾ ಅವರಿಗೆ ದ್ವಿತೀಯ ಹಾಗೂ ಬಿ.ಬಿ.ರಜಾ ಮಹಿಳಾ ಪದವಿ ಕಾಲೇಜಿನ ಅಭ್ಯರ್ಥಿ ಅನೀಕಶುಭಿ ಅವರಿಗೆ ತೃತೀಯ ಸ್ಥಾನ ಗಳಿಸಿದ್ದಕ್ಕಾಗಿ ಬಹುಮಾನ ನೀಡಲಾಯಿತು.
ಒಟ್ಟು 9 ಜನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದ ಜೊತೆ ಕ್ರಮವಾಗಿ ಪ್ರಥಮ ಸ್ಥಾನಕ್ಕೆ 3,000 ರೂ. ದ್ವಿತೀಯ ಸ್ಥಾನಕ್ಕೆ 2,000 ರೂ. ಹಾಗೂ ತೃತೀಯ ಸ್ಥಾನಕ್ಕೆ 1,000 ರೂ. ನಗದು ಬಹುಮಾನ ನೀಡಲಾಯಿತು.