ದೇಶಕ್ಕೆ ಉಪ್ಪಾರ ಸಮಾಜದ ಸೇವೆ ಅಪಾರ
ಬ್ಯಾಡಗಿ,ಆ29: ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಉಪ್ಪಾರ ಸಮಾಜ ಸಮಾಜದವರು ಸೂರ್ಯವಂಶ ಕ್ಷತ್ರಿಯ ಆನುವಂಶಿಕರು ಎನ್ನುವುದು ದಾಖಲೆಗಳ ಮೂಲಕ ಧೃಢಪಟ್ಟಿದೆ ಎಂದು ಉಪ್ಪಾರ ಸಮಾಜದ ಭಗೀರಥ ಪೀಠ, ಬ್ರಹ್ಮವಿದ್ಯಾನಗರ ಹೊಸದುರ್ಗದ ಶ್ರೀ ಜಗದ್ಗುರು ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶ್ರೀವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಉಪ್ಪಾರ ಸಮಾಜ ಸಂಘದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪ್ಪಾರ ಸಮಾಜ 650 ವರ್ಷಗಳ ಹಿಂದಿನಿಂದ ಗುರುಪೀಠ ಹೊಂದಿದೆ. ನಾವು ದೇಶದ ಉದ್ದಕ್ಕೂ ಸಂಚರಿಸಿ ಸಮಾಜದ ಸಂಘಟನೆ ಮಾಡಲು ಭಗೀರಥ ಪ್ರಯತ್ನ ನಡೆಸಿದ್ದೇವೆ. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಹಿಳೆಯರು, ಯುವಕರು ಸಂಘಟನೆಯತ್ತ ಮುನ್ನಡೆಯಬೇಕು. ಉಪ್ಪಾರ ಸಮಾಜದವರು ರಾಜಕೀಯವಾಗಿ ಮುಂದೆ ಬರಬೇಕು. ಯುವಕರು ಹೆಚ್ಚಿನ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದು ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದು ಆಶೀರ್ವಚನ ನೀಡಿದರು.

ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಂಜುನಾಥ ಉಪ್ಪಾರ ಮಾತನಾಡಿ, ಸಂಘದ ಉದ್ದೇಶಗಳನ್ನು ನೆರವೇರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ತಿಳಿಸುತ್ತ, ಸಮಾಜಕ್ಕೆ ಒಂದು ನಿವೇಶನವನ್ನು ಪಡೆದುಕೊಂಡು ಅಲ್ಲಿ ಸುಸಜ್ಜಿತವಾದ ಸಮುದಾಯ ಭವನ ಹಾಗೂ ಭಗೀರಥ ಮಹರ್ಷಿಗಳ ದೇವಸ್ಥಾನ ನಿರ್ಮಿಸುವುದು, ಮಹಿಳೆಯರ ಸಂಘಟನೆ ರಚಿಸಿ ಮಹಿಳಾ ಸಬಲೀಕರಣ, ಸಮಾಜದ ಯುವಕರಿಗೆ ಶೈಕ್ಷಣಿಕ ಸಹಾಯ ಹಾಗೂ ಸರಕಾರದಿಂದ ಸಮಾಜಕ್ಕೆ ಸಿಗುವ ಮೂಲಭೂತ ಸೌಲಭ್ಯಗಳನ್ನು ಪೂರೈಸಿಕೊಳ್ಳಲು ಸೂಕ್ತ ಸಲಹೆ ನೀಡುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ತಾಲೂಕಾ ಘಟಕದ ಎಲ್ಲ ಪದಾಧಿಕಾರಿಗಳಿಗೆ ಸ್ವಾಮೀಜಿಯವರು ಪ್ರಮಾಣ ವಚನ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಲಕ್ಷ್ಮಣ ಉಪ್ಪಾರ, ಜೈಕುಮಾರ ಉಪ್ಪಾರ, ಅಬಕಾರಿ ನಿರೀಕ್ಷಕ ರಾಮು ಅರೆಣ್ಣನವರ, ಸಿಪಿಐ ಮಾಳಪ್ಪ, ಸಾಹಿತಿ ಸುರೇಶ ಮಲ್ಲಾಡದ ಆಗಮಿಸಿದ್ದರು. ಸಮಾರಂಭದಲ್ಲಿ ಸಮಾಜದ ಎಲ್ಲ ಮುಖಂಡರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.