ಮಹಿಳಾ ದೌರ್ಜನ್ಯ ಖಂಡಿಸಿ ಪ್ರತಿಭಾ ಮೆರವಣಿಗೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.29:– ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆ ಖಂಡಿಸಿ ಟೆರೇಷಿಯನ್ ಕಾಲೇಜು ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕಾಲೇಜು ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ದೇಶದಲ್ಲಿ ಹಾಗೂ ಕರ್ನಾಟದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಹತ್ಯೆ, ದೌರ್ಜನ್ಯಗಳು ಪ್ರಕರಣಗಳು ಹೆಚ್ಚಾಗುತ್ತಿವೆ.
ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಅಲ್ಲದೆ ಸಮಾಜದಲ್ಲಿ ಮಹಿಳೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಮಹಿಳೆಯರ ಕೆಲಸದ ಸ್ಥಳಗಳಲ್ಲಿ ಉತ್ತಮ ಭದ್ರತೆಯ ವಾತಾವರಣೆ ಇಲ್ಲದಂತಾಗಿದೆ ಎಂದು ಕಿಡಿ ಕಾರಿದರು.
ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಸರ್ಕಾರಗಳು ಕಠಿಣ ಕಾನೂನು ಜಾರಿಗೊಳಿಸಿ ಶಿಕ್ಷೆಗೆ ಒಳಪಡಿಸಬೇಕು. ಫಾಸ್ಟ್‍ಟ್ರ್ಯಾಕ್ ಕೋರ್ಟ್ ಸ್ಥಾಪಿಸಿ ಅತ್ಯಾಚಾರಿಗಳಿಗೆ ಶೀಘ್ರವಾಗಿ ಶಿಕ್ಷೆ ನೀಡಬೇಕು. ಸಂತ್ರಸ್ತರಿಗೆ ಸರ್ಕಾರಗಳು ಸೂಕ್ತ ರಕ್ಷಣೆಯೊಂದಿಗೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.
ಮಹಿಳಾ ಸಮಾನತೆ, ಅತ್ಯಾಚಾರ, ದೌರ್ಜನ್ಯದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಅಪರಾಧ ಪ್ರಮಾಣ ಕಡಿಮೆ ಮಾಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಶಿವರಾಜು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಸಿ.ಜಯಂತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.