ಕೆನೆಪದರ ನೀತಿ ಕೈಬಿಡಲು ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು: ಆ.29:- ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡುವಾಗ ಕೆನೆ ಪದರ ನೀತಿ ಅಳವಡಿಸಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪರಾಮರ್ಶಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈಲ್ವೆ ನೌಕರರ ಸಂಘದಿಂದ ರೈಲು ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಆದರೆ, ಕೆನೆಪದರ ನೀತಿ ಅಳವಡಿಸಬೇಕೆಂಬುದು ಸರಿಯಲ್ಲ. ರಾಜ್ಯ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯ ಇನ್ನೂ ಅಗತ್ಯ ಮಟ್ಟ ತಲುಪಿಲ್ಲ. ಆರ್ಥಿಕ ಮಾನದಂಡ ಮತ್ತು ಕೆನೆಪದರ ಅಭ್ಯರ್ಥಿಗಳ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು. ಈಗಲೂ ತುಳಿತಕ್ಕೊಳಗಾದ ಜಾತಿಗಳ ಜನರ ವಿರುದ್ಧದ ತಾರತಮ್ಯದಿಂದಾಗಿ ಅನೇಕ ಸಂಸ್ಥೆಗಳ ಮೀಸಲು ಹುದ್ದೆಗಳು ಖಾಲಿಯಿವೆ. ಕೆನೆ ಪದರ ಪರಿಕಲ್ಪನೆ ಮೀಸಲಾತಿ ಅನುಷ್ಠಾನಕ್ಕೆ ಪ್ರಯೋಜನಕ್ಕಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಶತಮಾನದಿಂದ ಆಚರಣೆಯಲ್ಲಿರುವ ಆರ್ಥಿಕ ಅಸಮಾನತೆ, ಸಾಮಾಜಿಕ ತಾರತಮ್ಯ ಸರಿದೂಗುವುದಿಲ್ಲ ಎಂದು ಬೇಸರಿಸಿದರು.
ಕೂಡಲೇ ನ್ಯಾಯಾಲಯ ತನ್ನ ತೀರ್ಪನ್ನು ಪರಾಮರ್ಶೆ ಮಾಡಬೇಕು. ಕೆನೆ ಪದರ ನೀತಿ ಅಳವಡಿಕೆಯನ್ನು ಕೈಬಿಡುವ ಮೂಲಕ ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಬಳಿಕ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಲಯ ಅಧ್ಯಕ್ಷ ಕೆ.ಎಸ್.ದ್ಯಾಮಣ್ಣನವರ್, ಕಾರ್ಯದರ್ಶಿ ಎಂ.ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು.