ಮಾರೇನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್ ಭೇಟಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.29: ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ವಯೋವೃದ್ದ ಮಹಿಳೆಯರು ಮೃತರಾಗಿದ್ದು 10 ಕ್ಕೂ ಹೆಚ್ಚು ಮಂದಿ ಹಾಸನದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಸಂಚಾರ ನಡೆಸಿ ಮನೆಮನೆಗೆ ಭೇಟಿ ನೀಡಿ ಆರೋಗ್ಯ ಕುಶಲೋಪರಿ ನಡೆಸಿದರು.
ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಭಾರತಿಪುರ ಕ್ರಾಸ್ ಗ್ರಾ.ಪಂ ವ್ಯಾಪ್ತಿಗೆ ಬರುವ ಮಾರೇನಹಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ತೀವ್ರ ವಾಂತಿ ಭೇದಿಯಿಂದ ಇಬ್ಬರು ವಯೋವೃದ್ದರೂ ಮೃತಪಟ್ಟಿದ್ದು ಉಳಿದವರು ಹಾಸನ – ಚನ್ನರಾಯಪಟ್ಟಣ – ಶ್ರವಣಬೆಳಗೊಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಮಾರೇನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಇಂದು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ:ಕುಮಾರ್ ಮಾರೆನಹಳ್ಳಿ ಗ್ರಾಮದಲ್ಲಿ ಕಳೆದ ಆರು ಏಳು ದಿನಗಳ ಹಿಂದೆ ಗ್ರಾಮದ 17 ಜನರಲ್ಲಿ ತೀವ್ರ ವಾಂತಿಭೇದಿಯಿಂದ ಅನಾರೋಗ್ಯಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಗ್ರಾಮಸ್ಥರು ವಾಂತಿ ಬೇಧಿಯಿಂದ ಬಳಲುತ್ತಿರುವ ಸುದ್ದಿ ತಿಳಿದ ದಿನದಿಂದಲೂ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ಪ್ರತಿನಿತ್ಯ ಗುಣಮಟ್ಟದ ಚಿಕಿತ್ಸೆಯ ಮೂಲಕ ರೋಗಿಗಳ ಸಂಪರ್ಕದಲ್ಲಿದ್ದು ಅದರಲ್ಲಿ 13 ಜನ ಗುಣಮುಖರಾಗಿದಾರೆ. ಉಳಿದ ನಾಲ್ಕು ಮಂದಿ ಮಾತ್ರ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರಿಗೂ ಸೂಕ್ತ ಚಿಕಿತ್ಸೆ ಕೊಡಿಸಲು ಜಿಲ್ಲಾಡಳಿತದಿಂದ ಸೂಚಿಸಿದ್ದೇವೆ. ಗ್ರಾಮ ಪಂಚಾಯಿತಿಯಿಂದ ಮಾರೇನಹಳ್ಳಿ ಗ್ರಾಮಕ್ಕೆ ಬರುವ ನೀರನ್ನು ಎರಡು ಬಾರಿ ಪರಿಶೀಲನೆಗೆ ಒಳಪಡಿಸಿದ ನಂತರವೂ ವರದಿಯಲ್ಲಿ ಕುಡಿಯುವುದಕ್ಕೆ ಯೋಗ್ಯವಾದ ಶುದ್ಧ ನೀರು ಎಂದೂ ವರದಿ ಬಂದಿದೆ. ಆದರೆ ಗ್ರಾಮದಲ್ಲಿ ಕೆಲವು ಮನೆಗಳಲ್ಲಿ ಖಾಸಗಿ ಕೊಳವೆ ಬಾವಿಗಳಿದ್ದು ಆ ನೀರುಗಳನ್ನು ಪರಿಶೀಲನೆಗೆ ಕಳಿಸಿಕೊಡಲಾಗಿದೆ. ಮಾರೇನಹಳ್ಳಿ ಜವರಮ್ಮ ಮತ್ತು ಕಾಳಮ್ಮ ವಯೋ ಸಹಜನದಿಂದ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದ್ದು ಇವರ ಸಾವಿಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಮಾರೇನಹಳ್ಳಿ ಗ್ರಾಮದ ಜನರು ಯಾವುದೇ ಭಯಪಡುವ ಅಗತ್ಯವಿಲ್ಲ. ಮಾರೇನಹಳ್ಳಿ ಗ್ರಾಮದಲ್ಲಿ ಭಾರತೀಪುರ ಕ್ರಾಸ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಹರ್ಷವರ್ಧಿನಿ ಅವರ ಜೊತೆಗೆ ತಜ್ಞ ವೈದ್ಯರ ತಂಡವೇ ಬೀಡುಬಿಟ್ಟಿದ್ದು ಗ್ರಾಮದ ಎಲ್ಲಾ ಜನರ ಆರೋಗ್ಯ ಪರೀಕ್ಷೆ ಮಾಡಿ ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಿದೆ. ಆದ್ದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗುವುದು ಬೇಕಾಗಿಲ್ಲ ಜಿಲ್ಲಾ ಹಾಗೂ ತಾಲೂಕು ಆಡಳಿತವು ನಿಮ್ಮ ಜೊತೆಗಿದೆ. ವೈರಲ್ ಡಯೇರಿಯಾದಿಂದಾಗಿ ವಾಂತಿಬೇದಿ ಪ್ರಕರಣವು ಸಂಭವಿಸಿದೆ. ಯಾರೂ ಭಯ ಪಡಬೇಕಾಗಿಲ್ಲ. ಕುಡಿಯಲು ಬಿಸಿ ಮಾಡಿ ಕುದಿಸಿ ಆರಿಸಿದ ನೀರನ್ನೇ ಬಳಸಿ, ವಯಕ್ತಿಕ ಸ್ವಚ್ಛತೆಗೆ ಗಮನ ಹರಿಸಿ ಎಂದು ಆತ್ಮವಿಶ್ವಾಸ ತುಂಬಿದರಲ್ಲದೆ ಗ್ರಾಮದ ಜನರ ಹಿತ ಕಾಯಲು ಜಿಲ್ಲೆ ಮತ್ತು ತಾಲೂಕು ಆಡಳಿತ ಬದ್ಧರಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು.
ಸಿಇಒ ಶೇಕ್ ತನ್ವೀರ್ ಆಸಿಫ್, ಡಿ.ಹೆಚ್.ಓ ಡಾ:ಮೋಹನ್, ತಹಶೀಲ್ದಾರ್ ಆದರ್ಶ, ತಾಲೂಕು ಆರೋಗ್ಯ ಅಧಿಕಾರಿ ಡಾ.ಅಜಿತ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಇದ್ದರು.