ಸರ್ಕಾರಿ ಕಾಲೇಜಿನ ಉಪನ್ಯಾಸಕನಿಗೆ ಒಲಿದ ರಾಷ್ಟ್ರೀಯ ಪ್ರಶಸ್ತಿ
ಸಂಜೆವಾಣಿ ವಾರ್ತೆ
ಹುಣಸೂರು.ಆ.29:- ಬಾಲಕಿಯರ ಪಿ.ಯು.ಕಾಲೇಜಿನ ಉಪನ್ಯಾಸಕ ಎಚ್.ಎನ್.ಗಿರೀಶ್‍ಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
ಕಳೆದ 20 ವರ್ಷಗಳಿಂದ ಜನಸಾಮಾನ್ಯರಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದ್ದ ಜೀವಶಾಸ್ತ್ರ ಉಪನ್ಯಾಸಕ ಎಚ್. ಎನ್.ಗಿರೀಶ್ ರವರಿಗೆ ಈ ಸಾಲಿನ ರಾಷ್ಟ್ರೀಯ ಉತ್ತಮ ಶಿಕ್ಷಕರ ಪ್ರಶಸ್ತಿ ಲಭಿಸಿದೆ.
2003ರಲ್ಲಿ ತಿ.ನರಸೀಪುರದಲ್ಲಿ ಕೆಲ ಏಡ್ಸ್ ರೋಗಿಗಳು ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಮನನೊಂದ ಗಿರೀಶ್ ತಿ.ನರಸೀಪುರದ ಮೆಣಸಿನಕ್ಯಾತನಹಳ್ಳಿಯಲ್ಲಿ ‘ಏಡ್ಸ್ ಅಮ್ಮನ ದೇವಸ್ಥಾನ’ ತೆರೆದು ಧಾರ್ಮಿಕ ಹಾದಿಯ ಮೂಲಕ ವಿಜ್ಞಾನದ ಸಂಗತಿಯನ್ನು ಜನರಲ್ಲಿ ಮನವರಿಕೆ ಮಾಡಿಕೊಟ್ಟಿದ್ದರು. ಏಡ್ಸ್ ಹೇಗೆ ಬರುತ್ತದೆ ಎಂಬುದನ್ನು ಗ್ರಾಮಸ್ಥರಿಗೆ ವೈಜ್ಞಾನಿಕವಾಗಿ ತಿಳಿಸಿ ಕೊಟ್ಟಿ ದ್ದರು. ಏಡ್ಸ್ ರೋಗಿಗಳ ಜತೆ ಒಟ್ಟಿಗೆ ಊಟ ಮಾಡಿ, ಇದು ಸಾಂಕ್ರಾಮಿಕ ಕಾಯಿಲೆಯಲ್ಲ ಎಂಬುದನ್ನು ತಿಳಿಸಿದ್ದರು.
ನಂತರ ಕ್ಯಾನ್ಸರ್, ಎಚ್1 ಎನ್1, ಋತುಸ್ರಾವ, ಶೌಚಗೃಹ, ವೈಯಕ್ತಿಕ ಸ್ವಚ್ಛತೆ ಬಗ್ಗೆ ನಿರಂತವಾಗಿ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಹೀಗೆ ಮೂರು ದಶಕಗಳಿಗೂ ಹೆಚ್ಚುಕಾಲ ಶಿಕ್ಷಣ ಕ್ಷೇತ್ರದಲ್ಲಿ ಗಿರೀಶ್ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸೆ. 5ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಶಸ್ತಿಯು ಮೆರಿಟ್ ಪ್ರಮಾಣಪತ್ರ, 50 ಸಾವಿರ ರೂ ನಗದು ಬಹುಮಾನ ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ. ಗಿರೀಶ್ ಅವರು ಹುಣಸೂರಿನ ಎಚ್.ಎನ್.ನಿಂಗೇಗೌಡ ಹಾಗೂ ಲಲಿತಮ್ಮ ದಂಪತಿಗಳ ಪುತ್ರರಾಗಿದ್ದು.
ಪ್ರತಿಭಾವಂತ ಶಿಕ್ಷಕ ಜೀವಶಾಸ್ತ್ರ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ಅವರ ಸಂದರ್ಶನ ಬಿ.ಬಿ.ಸಿಯಲ್ಲೂ ಪ್ರಸಾರವಾಗಿದೆ. ಅಮೆರಿಕದ ಹಾರ್ವಡ್ ಯೂನಿವರ್ಸಿಟಿಯ ಸಂಶೋಧನಾ ವಿದ್ಯಾರ್ಥಿನಿ ಮೈಸೂರಿಗೆ ಆಗಮಿಸಿ ಏಡ್ಸ್ ಅಮ್ಮನ ದೇವಾಲಯದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ‘ಧರ್ಮ ಮತ್ತು ವಿಜ್ಞಾನ’ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ್ದಾರೆ.
ಗಿರೀಶ್ ಅವರಿಗೆ ಕಳೆದ ವರ್ಷ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು. 2003ರಲ್ಲಿ ಜಿ-20 ಶೃಂಗಸಭೆಯ ‘ನ್ಯಾಷನಲ್ ಎಜುಕೇಷನ್ ಎಕ್ಸಲೆನ್ಸ್’ 2 ಪ್ರಶಸ್ತಿಯನ್ನು ನೋಯ್ದಾದಲ್ಲಿ ಪ್ರದಾನ ಮಾಡಲಾಗಿತ್ತು.
ಶಾಸಕ ಹರೀಶ್ ಗೌಡ, ಸಿ.ಡಿ.ಸಿ ಸಮಿತಿ, ಕಾಲೇಜಿನ ಪ್ರಾಂಶುಪಾಲ ರಾಮೇಗೌಡ ಮತ್ತು ಅಧ್ಯಾಪಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.