ಶಾಸಕ ಗಣಿಗ ರವಿ ಮೇಲೆ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ
ಸಂಜೆವಾಣಿ ವಾರ್ತೆ
ಮಂಡ್ಯ:ಆ.29:-ಇಲ್ಲಿನ ನಗರಸಭೆ ಚುನಾವಣೆ ಮತದಾನದ ವೇಳೆಯಲ್ಲೇ ಚುನಾವಣಾಧಿಕಾರಿ ಸಮಕ್ಷಮದಲ್ಲಿಯೇ ಸ್ಥಳೀಯ ಶಾಸಕರು ನಮ್ಮ ಪಕ್ಷದ ಸದಸ್ಯರಿಗೆ ಅಡ್ಡ ಮತದಾನಕ್ಕೆ ಕುಮ್ಮಕ್ಕು ನೀಡಿ ಕಣ್ಸನ್ನೇ, ಕೈಸನ್ನೇ ಮೂಲಕ ಹಣದ ಆಮೀಷ ಒಡ್ಡಿದರು ಎಂದು ಮಂಡ್ಯ ಲೋಕಸಭೆ ಸದಸ್ಯರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಅತ್ಯಂತ ಗಂಭೀರ ಆರೋಪ ಮಾಡಿದರು.
ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.
ವಾಮಮಾರ್ಗದಲ್ಲಿ ಜೆಡಿಎಸ್ ಬಿಜೆಪಿ ಪಕ್ಷಗಳು ಅಧಿಕಾರ ಹಿಡಿದವು ಎಂದು ಶಾಸಕ ಗಣಿಗ ರವಿ ನೀಡಿರುವ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವರು; ಶಾಸಕರ ಪ್ರಕಾರ ವಾಮಮಾರ್ಗದ ಅರ್ಥವೇನು ಮತದಾನದ ವೇಳೆಯಲ್ಲಿಯೂ ಕಣ್ಸನ್ನೇ, ಕೈಸನ್ನೇ ಮೂಲಕ ನಮ್ಮ ಸದಸ್ಯರಿಗೆ ಹಣದ ಆಮೀಷ ಒಡ್ಡಿದ್ದು ವಾಮಮಾರ್ಗ ಅಲ್ಲದೆ ಮತ್ತೇನು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ನನ್ನ ಜೀವನದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ ಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಲೇಬೇಕಾಯಿತು. ದೆಹಲಿಯಲ್ಲಿ ಸಚಿವ ಸಂಪುಟದ ಸಭೆ ನಿಗದಿ ಆಗಿತ್ತು. ನಾನು ಪ್ರಧಾನಮಂತ್ರಿಗಳ ಕಚೇರಿಯ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ. ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಅಷ್ಟರ ಮಟ್ಟಿಗೆ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಅವರು ಪ್ರಹಾರ ನಡೆಸಿದರು.