ನೂತನ ನಿರ್ದೇಶಕರಿಗೆ ಮಲ್ಲಿಕಾರ್ಜುನ್ ಅಭಿನಂದನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.29: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿಕಾವಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2024-2029ನೇ ಸಾಲಿನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಸನ್ಮಾನಿಸಿ ಅಭಿನಂದಿಸಿದರು.
ಪಟ್ಟಣದಲ್ಲಿರುವ ತಮ್ಮ ಕಚೇರಿಯಲ್ಲಿ ನೂತನ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದ ಸಮಾಜ ಸೇವಕರು ಹಾಗೂ ಆರ್.ಟಿ.ಓ ಅಧಿಕಾರಿಗಳಾದ ಮಲ್ಲಿಕಾರ್ಜುನ್ ನಮ್ಮ ಆಲಂಬಾಡಿಕಾವಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವು ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ಆಡಳಿತ ಮಂಡಳಿಯ ಎಲ್ಲಾ 13ಸ್ಥಾನಗಳಿಗೆ ಗ್ರಾಮದ ಎಲ್ಲಾ ಸಮುದಾಯ ವರ್ಗದ ಜನರಿಂದ ಕೂಡಿದ ನಿರ್ದೇಶಕ ಮಂಡಳಿಯನ್ನು ಎಲ್ಲಾ ಜನಾಂಗದ ಯಜಮಾನರುಗಳನ್ನು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಿರೋಧವಾಗಿ ಆಯ್ಕೆ ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ.ಇದೇ ರೀತಿ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸಂಘದ ನೌಕರರನ್ನು ಆಯ್ಕೆ ಮಾಡಿಕೊಂಡು ಸಂಘದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಂಘದಲ್ಲಿ ರಾಜಕೀಯ ಬೆರೆಸದೇ ಎಲ್ಲರೂ ಪರಸ್ಪರ ಸಹಕಾರ ಹಾಗೂ ಸೇವಾ ಭಾವನೆಯಿಂದ ಸಂಘದ ಏಳಿಗೆಗೆ ಕೈಜೋಡಿಸಬೇಕು ಎಂದು ಆರ್.ಟಿ.ಓ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ ಮಾತನಾಡಿ ಆಲಂಬಾಡಿಕಾವಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಆರಂಭಿಸಬೇಕೆಂದು ಕಳೆದು 30ವರ್ಷಗಳಿಂದ ಪ್ರಯತ್ನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಂಘವನ್ನು ಆರಂಭಿಸಲು ಆಗಿರಲಿಲ್ಲ. ಈಗ ಗ್ರಾಮದವರೇ ಆದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರ ಗ್ರಾಮದ ಅಭಿವೃದ್ಧಿಗೆ ಹಾಲಿನ ಡೇರಿ ಅವಶ್ಯಕತೆ ಇರುವುದನ್ನು ಕಣ್ಣಾರೆ ಕಂಡು, ಹೇಗಾದರೂ ಮಾಡಿ ಗ್ರಾಮದಲ್ಲಿ ಡೇರಿಯನ್ನು ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರಾಮಾಣಿಕ ಪ್ರಯತ್ನ ಮಾಡಿ, ಎಲ್ಲಾ ಸಮುದಾಯದ ಬಂಧುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಚರ್ಚೆನಡೆಸಿ, ಎಲ್ಲರಿಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಿರ್ದೇಶಕರ ಸ್ಥಾನಗಳನ್ನು ಯಾವುದೇ ಲೋಪವಿಲ್ಲದೇ ಹಂಚಿಕೆ ಮಾಡಿದ ಪರಿಣಾಮ ಯಾವುದೇ ಚುನಾವಣೆ ಇಲ್ಲದೇ ಸಂಘಕ್ಕೆ 13ಮಂದಿ ನಿರ್ದೇಶಕರು ಇಂದು ನಿಗಧಿಯಾಗಿದ್ದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದೆ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ನೌಕರರ ಆಯ್ಕೆಗೂ ಮಲ್ಲಿಕಾರ್ಜುನ್ ಅವರಿಗೇ ಸಂಪೂರ್ಣ ಅಧಿಕಾರ ನೀಡಿದ್ದೇವೆ ಅವರು ಯಾರನ್ನು ಆಯ್ಕೆ ಮಾಡುತ್ತಾರೋ ಅವರು ಅಧಿಕಾರ ವಹಿಸಿಕೊಂಡು ಸಂಘದ ಅಭಿವೃದ್ಧಿಗೆ ಒಳ್ಳೆಯ ಕೆಲಸ ಮಾಡಬೇಕು ಎಂದು ಸಂಜೀವಪ್ಪ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ ವಿ.ಎಸ್.ಎಸ್.ಎನ್.ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದಿಕ್ ಅಹಮದ್, ಗ್ರಾಮ ಪಂಚಾಯಿತಿ ಸದಸ್ಯ ಎ.ರಾಜು, ರವಿ, ಡಿ.ಮಹಾದೇವ್, ಪ್ರಮೋದ್‍ಕುಮಾರ್, ತಾ.ಪಂ.ಮಾಜಿ ಸದಸ್ಯೆ ಮುತ್ತಮ್ಮ ನಾಗರಾಜು, ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.