ಆಲ್ಪಸಂಖ್ಯಾರ, ಪಕ್ಷೇತರ ಮತಗಳು ಸೆಳೆಯಲು ಸಫಲ
ಕೋಲಾರ,ಆ,೨೯- ರಾಜ್ಯದ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ನಸ್ಸೀರ್ ಆಹಮದ್ ಅವರು ನಗರ ಸಭೆ ಚುನಾವಣೆಯಲ್ಲಿ ಕಡೆಗಳಿಗೆಯಲ್ಲಿ ಮಾಡಿದ ತಂತ್ರಗಾರಿಕೆಯಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಗೆ ಕಾರಣವಾಯಿತು,
ಕಾಂಗ್ರೇಸ್ ಬಂಡಾಯ ಅಭ್ಯರ್ಥಿಯೆಂದು ಘೋಷಣೆಯಾಗಿ ಪಕ್ಷೇತತರಾಗಿ ಸ್ವರ್ಧಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿದ್ದ ಬಿ.ಎಂ. ಮುಬಾರಕ್ ಅವರು ಈ ಭಾರಿ ಶತಾಯಗತಾಯ ನಗರಸಭೆ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲೇ ಬೇಕೆಂದು ನಗರಸಭೆಯ ವಿವಿಧ ಪಕ್ಷದ ಬೆಂಬಲಿತ ಸದಸ್ಯರೊಂದಿಗೆ ಸೇರಿ ಬಹುಮತಕ್ಕೆ ಅಗತ್ಯವಾದ ಸ ೨೦ ಮಂದಿ ಸದಸರೊಂದಿಗೆ ಮಾತುಕತೆ ನಡೆಸಿ ತಮಗೆ ಬೆಂಬಲದ ಭರವಸೆಯನ್ನು ಪಡೆದಿದ್ದರು,
ಜೆ.ಡಿ.ಎಸ್ ಹಾಗೂ ಮೈತ್ರಿ ಪಕ್ಷದ ಸದಸ್ಯರನ್ನು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಲೋಕಸಭಾ ಸದಸ್ಯ ಮಲ್ಲೇಶ್ ಬಾಬು ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರುಗಳ ಮಧ್ಯಸ್ಥಿಗೆಯಲ್ಲಿ ಸದಸ್ಯರನ್ನು ಒಲೈಸಿ ಕೊಂಡಿದ್ದರು. ಇತ್ತ ಕಾಂಗ್ರೇಸ್ ಪಕ್ಷದಿಂದ ಬೆಂಬಲವನ್ನು ಯಾಚಿಸಿ ಕಾಂಗ್ರೆಸ್ ಮುಖಂಡರೊಂದಿಗೂ ಮಾತು ಕತೆ ನಡೆಸುತ್ತಿದ್ದರು.
ಮುಬಾರಕ್ ಅವರ ತಂತ್ರಗಾರಿಕೆಯನ್ನು ಅರಿತ ನಸ್ಸೀರ್ ಆಹಮದ್ ನಗರಸಭೆ ಚುನಾವಣೆಯ ಅಖಾಡಕ್ಕೆ ನೇರವಾಗಿ ಇಳಿದು ಪ್ರತಿಷ್ಟೆಯಾಗಿ ಪರಿಗಣಿಸಿ ಕೊಂಡು ಶಾಸಕ ಕೊತ್ತೂರು ಮಂಜುನಾಥ್, ಅನಿಲ್ ಕುಮಾರ್, ಅವರೊಂದಿಗೆ ನಗರದ ಪ್ರಮುಖ ಕಾಂಗ್ರೇಸ್ ಯುವ ಮುಖಂಡರ ಸಹಕಾರ ಪಡೆದು ಪಕ್ಷೇತರ ನಗರಸಭಾ ಸದಸ್ಯರೊಂದಿಗೆ ಚರ್ಚಿಸಿ, ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದು, ನಗರಸಭೆಯ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಪಾಲಾದರೆ ನಗರದ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಮನದಟ್ಟು ಮಾಡಿದರು.
ಈ ಮಧ್ಯೆ ಮುಬಾರಕ್ ಅವರು ಎಸ್.ಡಿ.ಪಿ.ಐ. ಬೆಂಬಲ ಪಡೆದಿದ್ದ ೪ ಮಂದಿ ಸದಸ್ಯರನ್ನು ನಸ್ಸೀರ್ ಆಹಮದ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು.
ಕೆಲವು ಆಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಕಾಂಗ್ರೇಸ್ ಪಕ್ಷದ ಸದಸ್ಯರನ್ನು ಮುಬಾರಕ್ ತಮ್ಮತ್ತ ಸೆಳೆದು ಕೊಂಡಿದ್ದನ್ನು ನಸ್ಸೀರ್ ಅಹಮದ್ ಅವರು ಕುಡಾ ಅಧ್ಯಕ್ಷ ಹನೀಫ್ ಹಾಗೂ ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೊಂ ನೇತ್ರತ್ವದಲ್ಲಿ ಮರಳಿ ಕಾಂಗ್ರೆಸ್ ಬರುವಂತೆ ಮಾಡುವಲ್ಲಿ ಸಫಲರಾದ ಹಿನ್ನಲೆಯಲ್ಲಿ ಮುಬಾರಕ್‌ಗೆ ಬೆಂಬಲ ಸೂಚಿಸಿದ್ದ ಆಲ್ಪಸಂಖ್ಯಾತ ಬಹುತೇಕ ಸದಸ್ಯರುಗಳು ನಸ್ಸೀರ್ ಆಹಮದ್ ನೇತ್ರತ್ವದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು,
ಮುಬಾರಕ್ ಅವರು ತಾವು ವಿಶ್ವಾಸ ಇರಿಸಿದ್ದ ಸದಸ್ಯರುಗಳು ಕಡೆಗಳಿಗೆಯಲ್ಲಿ ಕೈ ಕೊಟ್ಟು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಪರವಾಗಿರುವುದನ್ನು ಅರಿತು ಚುನಾವಣೆಯಲ್ಲಿ ಮುಖಭಂಗವಾಗುವುದನ್ನು ತಪ್ಪಿಸಿ ಕೊಳ್ಳಲು ತಮ್ಮ ನಾಮ ಪತ್ರವನ್ನು ವಾಪಾಸ್ ಪಡೆದರೆ ಮಾರ್ಯದೆಯಾದರೂ ಉಳಿಯುವುದೆಂದು ನಿರ್ಧರಿಸಿ ಮುಬಾರಕ್ ಮತ್ತು ಅಪೂರ್ವ ಅವರು ತಮ್ಮ ನಾಮಪತ್ರವನ್ನು ವಾಪಾಸ್ ಪಡೆದು ಅವಿರೋಧವಾಗಿ ಆಯ್ಕೆಯಾಗಿ ಕೈ ಜೋಡಿಸಿದರು,
ಇದಕ್ಕೂ ಮುನ್ನ ನಗರಸಭೆ ಅವರಣದಲ್ಲಿ ಕಾಂಗ್ರೇಸ್ ಪಕ್ಷದ ಉಸ್ತುವಾರಿ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಅವರು ಮುಬಾರಕ್ ತಮ್ಮ ಬೆಂಬಲಿಗರೊಂದಿಗೆ ಬಂದಾಗ ವಿಪ್ ಜಾರಿ ಮಾಡಿದರು. ಅದನ್ನು ಪಡೆದ ಮುಬಾರಕ್ ಅಕ್ರೋಶದಿಂದ ಹರಿದು ಬೀಸಾಕಿದ್ದರು.
ಕಾಂಗ್ರೇಸ್ ಪಕ್ಷವು ಬಿ.ಎಂ.ಮುಬಾರಕ್ ಅವರಿಗೆ ನೀಡಿದ್ದ ಅವಕಾಶವನ್ನು ತಿರಸ್ಕರಿಸಿ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪಕ್ಷ ವಿರೋಧ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಅವಕಾಶವಾದಿ ರಾಜಕಾರಣ ಮಾಡಿದ ಹಿನ್ನಲೆಯಲ್ಲಿ ಇಂದು ನಗರಸಭೆ ಅಧ್ಯಕ್ಷ ಸ್ಥಾನವನ್ನು ಕಳೆದು ಕೊಳ್ಳ ಬೇಕಾದ ಪರಿಸ್ಥಿತಿ ಉಂಟಾಯಿತು. ಇಲ್ಲವಾಗಿದ್ದರೆ ಇಂದು ಅವರೇ ನಗರಸಭೆ ಅಧ್ಯಕ್ಷರಾಗಿರುತ್ತಿದ್ದರು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು