ದೈಹಿಕ ಆರೋಗ್ಯದಿಂದ ಮಾನಸಿಕ ಸದೃಢತೆ ಸಾಧ್ಯ
ಕೋಲಾರ,ಆ,೨೯- ದೈಹಿಕವಾಗಿ ಆರೋಗ್ಯದಿಂದಿದ್ದಾರೆ ಮಾತ್ರವೇ ಮಾನಸಿಕವಾಗಿಯೂ ಸದೃಢರಾಗಿರಲು ಸಾಧ್ಯ ಎಂಬ ಸತ್ಯ ಅರಿತು ಪಠ್ಯದಷ್ಟೇ ಪ್ರಮುಖವಾಗಿರುವ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ಕನ್ನಯ್ಯ ಕರೆ ನೀಡಿದರು.
ತಾಲ್ಲೂಕಿನ ಪಾರ್ಶ್ವಗಾನಹಳ್ಳಿಯ ಸರಸ್ವತಿ ವಿದ್ಯಾಮಂದಿರದ ಆವರಣದಲ್ಲಿ ಶಾಲಾಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ವಕ್ಕಲೇರಿ ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಪೋಷಕರು ಮಕ್ಕಳ ಅಂಕ ಗಳಿಕೆಯ ಕಡೆ ಮಾತ್ರವೇ ಗಮನಹರಿಸುವುದರಿಂದ ಇಂದಿನ ಮಕ್ಕಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಲುಕಾರಣವಾಗಿದೆ, ಕ್ರೀಡೆಗಳು ಓದಲು ಆತ್ಮಸ್ಥೈರ್ಯ ತುಂಬುತ್ತವೆ ಎಂಬುದನ್ನು ಮರೆಯಬಾರದು ಎಂದರು.
ಸದಾ ನಾಲ್ಕು ಗೋಡೆಗಳ ನಡುವೆ ಓದಿಗೆ ಸೀಮಿತರಾದರೆ ಅವರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಎಂಬ ಕಾರಣದಿಂದಲೇ ಸಮಗ್ರ ಶಿಕ್ಷಣದ ಭಾಗವಾಗಿ ಕ್ರೀಡೆಗಳಿಗೂ ಆದ್ಯತೆ ನೀಡಲಾಗಿದೆ ಎಂದ ಅವರು, ಮಕ್ಕಳು ಕ್ರೀಡೆ, ವ್ಯಾಯಾಮ ಮರೆಯಬಾರದು ಎಂದರು.
ಸೋಲು-ಗೆಲುವು ಸಾಮಾನ್ಯ ಆದರೆ ಭಾಗವಹಿಸುವಿಕೆ ಅತಿ ಮುಖ್ಯ ಎಂದ ಅವರು, ಇಂದು ಸೋತವರು ಮುಂದಿನ ಬಾರಿ ಖಂಡಿತಾ ಗೆಲುವಿನ ದಡ ತಲುಪುತ್ತಾರೆ, ಅಂತಹ ಛಲದಿಂದ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸೂಲೂರು ಗ್ರಾಪಂ
ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಕ್ಕಲೇರಿಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ೪ ಗ್ರಾಮ ಪಂಚಾಯಿತಿಗಳ ಶಾಲೆಗಳ ಚಿಣ್ಣರು ಪಾಲ್ಗೊಂಡಿದ್ದೀರಿ, ನೀವು ಇಲ್ಲಿ ಗೆಲುವು ಸಾಧಿಸಿ ತಾಲ್ಲೂಕು,ಜಿಲ್ಲಾಮಟ್ಟದಲ್ಲೂ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಗೆದ್ದು ಬನ್ನಿ ಎಂದು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಸೂಲೂರು ಗ್ರಾಮ ಪಂಚಾಯಿತಿ ವತಿಯಿಂದ ವಕ್ಕಲೇರಿ ಹೋಬಳಿ ಮಟ್ಟದ ಕ್ರೀಡಾಕೂಟದ ಪ್ರಥಮ ಬಹುಮಾನಗಳಿಗಾಗಿ ೨೫ ಸಾವಿರ ರೂ ಅನುದಾನದ ಚೆಕ್ ನೀಡಿದ ಅವರು, ಕ್ರೀಡೆಗಳ ಬಗ್ಗೆ ನಿರ್ಲಕ್ಷ್ಯ ಬೇಡ, ಪಠ್ಯಕ್ಕಿಂತ ಹೆಚ್ಚಿನ ಸಾಧನೆ ಕ್ರೀಡೆಗಳಲ್ಲಿ ಮಾಡಿ ರಾಷ್ಟ್ರ ಮೆಚ್ಚುವ ವ್ಯಕ್ತಿಗಳಾಗಿರುವವರು ನಮ್ಮ ಕಣ್ಣ ಮುಂದೆ ಇದ್ದಾರೆ ಎಂದು ಉದಾಹರಿಸಿದರು.
ಖಾಸಗಿ ಶಾಲೆಗಳ ಸಂಘದ ಸಂಗಮೇಶ್ ಮಾತನಾಡಿ, ಕ್ರೀಡೆಗಳಲ್ಲಿ ತೀರ್ಪುಗಾರರ ಜವಾಬ್ದಾರಿ ಹೆಚ್ಚಿನದಾಗಿದೆ, ನೀವು ನಿಷ್ಪಕ್ಷಪಾತ ತೀರ್ಪು ನೀಡಿ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಿರಿ ಎಂದು ಮನವಿ ಮಾಡಿ, ಮಕ್ಕಳು ಕ್ರೀಡೆಗಳಲ್ಲಿ ಗೆಲುವು,ಸೋಲಿನ ಕುರಿತು ಚಿಂತಿಸದೇ ಛಲದಿಂದ ಆಟವಾಡಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್, ವಕ್ಕಲೇರಿ ಹೋಬಳಿ ಕ್ರೀಡಾಕೂಟದ ಯಶಸ್ಸಿಗೆ ಈ ಭಾಗದ ನಾಲ್ಕು ಗ್ರಾಮ ಪಂಚಾಯಿತಿಗಳು ಸಹಕಾರ ನೀಡಿವೆ, ಪ್ರಥಮ ಬಹುಮಾನಕ್ಕೆ ಸೂಲೂರು ಗ್ರಾ.ಪಂ ಅಧ್ಯಕ್ಷ ಸುರೇಶ್ ಅವರು ೨೫ ಸಾವಿರ ರೂ ನೀಡಿದ್ದಾರೆ, ಅರಾಭಿಕೊತ್ತನೂರುಗ್ರಾ.ಪಂ ಅಧ್ಯಕ್ಷೆ ರೇಣುಕಾಂಭ ಮುನಿರಾಜು ಅವರು ದ್ವಿತೀಯ ಬಹುಮಾನಕ್ಕಾಗಿ ೧೫ ಸಾವಿರ ಅನುದಾನ ಒದಗಿಸಿದ್ದಾರೆ.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ವಕ್ಕಲೇರಿಹೋಬಳಿಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ದೈಹಿಕ ಶಿಕ್ಷಕರಾದ ಕೆ.ಲೀಲಾ, ಅಂಬಿಕಾ, ಮಂಜುಳಾ,ಶ್ರೀನಿವಾಸ್, ಲಕ್ಷ್ಮೀಕಾಣತ್, ಸಂಗಪ್ಪ, ರಾಧಾ, ಶ್ರೀದೇವಿ,ಶ್ಯಾಮಸುಂದರ್,ಕೃಷ್ಣಮೂರ್ತಿ,ಮಾಲಾ, ವಿ.ಪ್ರಕಾಶ್, ಜಗದೀಶ್, ಮಹೇಶ್ ಮತ್ತಿತರರು ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸೂಲೂರು ಗ್ರಾ.ಪಂ ಸದಸ್ಯರಾದ ಮುನಿರೆಡ್ಡಿ, ಆದಿಮೂರ್ತಿ,ಕೃಷ್ಣಮೂರ್ತಿ, ಸರಸ್ವತಿ ವಿದ್ಯಾಮಂದಿರದ ಮುಖ್ಯಶಿಕ್ಷಕ ಮರಿಜೋಗಿ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ,ಖಾಸಗಿ ಶಾಲೆಗಳ ಸಂಘದ ಕಾರ್ಯದರ್ಶಿ ಬಸವೇಶ್ವರ ಶಾಲೆ ಜಗದೀಶ್,ಬಿಆರ್‌ಪಿ ರಶ್ಮಿ, ಸಿಆರ್‌ಪಿಗಳಾದ ಬಸವರಾಜ್, ಗೋವಿಂದು, ವಾಣಿಶ್ರೀ,ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸೋಮಶೇಖರ್, ವೆಂಕಟಾಚಲಪತಿಗೌಡ,ವೃತ್ತ ಕಾರ್ಯದರ್ಶಿ ಮಂಜುನಾಥ್, ಮುನಿರಾಜು,ಇಬ್ರಾಹಿಂ ಖಾನ್, ಶಿಕ್ಷಕರಾದ ಭವಾನಿ, ರಮಾದೇವಿ ಮತ್ತಿತರರಿದ್ದರು.ದೈಹಿಕ ಶಿಕ್ಷಕಿ ಕೆ.ಲೀಲಾ ಕ್ರೀಡಾಪ್ರತಿಜ್ಞೆ ಬೋಧಿಸಿದರು.