ಸರ್ಕಾರಿ ಸೌಲಭ್ಯ ದೊರಕಿಸಿ ಕೊಡಲು ಆಗ್ರಹಿಸಿ ಪಾದಯಾತ್ರೆ ಮೂಲಕ ಶಾಸಕರಿಗೆ ಮನವಿ
ಚಿಂಚೋಳಿ, ಆ.೨೯- ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿರುವ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡಗಳಲ್ಲಿನ ಪರಡಿ ಮಹಿಳೆಯರಿಗೆ ಬೂಥೆಯರಿಗೆ ಮತ್ತು ಮಂಗಳಮುಖಿಯರಿಗೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಒದಗಿಸುವಲ್ಲಿ ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ನಡೆಯನ್ನು ಖಂಡಿಸಿ ಹೋರಾಟಗಾರ ಹಾಗೂ ಭಾರತ ಮುಕ್ತಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಬಿ ಗಂಜಗಿರಿಯವರ ನೇತೃತ್ವದಲ್ಲಿ ಪರಡಿ ಮಹಿಳೆಯರು, ಬುಥೆಯರು ಹಾಗೂ ದೇವದಾಸಿಯರು ಶಾಸಕ ಡಾ.ಅವಿನಾಶ ಜಾಧವ ಅವರ ನಿವಾಸಕ್ಕೆ ತೆರಳಿ ಈ ಕುರಿತು ಶಾಸಕರ ಗಮನಕ್ಕೆ ತರಲಾಯಿತು.
ತಾಲೂಕಿನ ಚಂದಾಪುರ ಪಟ್ಟಣದ ತಾಂಡೂರ ಕ್ರಾಸ್ ನಿಂದ ಶಾಸಕರ ನಿವಾಸದವರೆಗೂ ಪಾದಯಾತ್ರೆಯನ್ನು ಮಾಡುತ್ತಾ ತೆರಳಿದ ಮಹಿಳೆಯರು ಶಾಸಕರ ಎದುರಿನಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದ ಮಾರುತಿ ಬಿ ಗಂಜಗಿರಿ ಮಾತನಾಡಿ, ವಿವಿಧ ವಸತಿ ಯೋಜನೆಗಳಲ್ಲಿ ಪರಡಿ ಮಹಿಳೆಯರಿಗೆ,ಬುಥೆಯರಿಗೆ,ಹಾಗೂ ದೇವದಾಸಿ ಮಹಿಳೆಯರಿಗೆ ವಸತಿ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ನಡೆಯ ವಿರುದ್ಧ ಶಾಸಕರ ಎದುರಿನಲ್ಲಿ ಅಸಮಾಧಾನಗೊಂಡರು.
ಅಲ್ಲದೇ ಕಂದಾಯ ಇಲಾಖೆಯಿಂದ ಪುರುಷ ವೃದ್ಧಾಪ್ಯ ಮತ್ತು ಪರಡಿ ಮಹಿಳೆಯರಿಗೆ ದೊರೆಯುವ ಸೌಲಭ್ಯಗಳ ವರದಿ ಮಾಡುವಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನೀರಿಕ್ಷಕರು ಮಧ್ಯವರ್ತಿಗಳ ಮಾತು ಕೇಳಿ ಪರಡಿ ಮಹಿಳೆಯರಿಗೆ ತಾರತಮ್ಯ ಮಾಡುತ್ತಿದ್ದಾರೆ. ಈ ವಿಷಯವನ್ನು ತಾವು ಗಂಭೀರವಾಗಿ ತೆಗೆದುಕೊಂಡು ತಾಲೂಕಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಿ ಇಂತಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡುವಂತೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ.ಅವಿನಾಶ ಜಾಧವ,ಈ ಕೂಡಲೆ ಅಧಿಕಾರಿಗಳಿಗೆ ಈ ರೀತಿಯ ನಡೆಯನ್ನು ಅನುಸರಿಸದಂತೆ ತಾಕೀತು ಮಾಡುತ್ತೇನೆ. ಪರಡಿ ಮಹಿಳೆಯರಿಗೆ,ಬೂಥೆಯರಿಗೆ ಆರಾಧಕರಿಗೆ ಹಾಗೆ ಮಂಗಳಮುಖಿ ಮತ್ತು ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನೀಡುವಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಗುರುಗಳಾದ ಸಿರಾಜ್ಜೋದ್ದಿನ್ ಪಟೇಲ ಕೂಪನೂರ,ಮೋಹನ ಐನಾಪುರ, ಸಾಗರ ಆನಂದಿ ಹೊಸಳ್ಳಿ,ದ್ರೌಪತಿ ಚಿಮ್ಮನಚೋಡ,ಮರೆಮ್ಮಾ,ಕಲ್ಲಮ್ಮಾ,ಪ್ರಭಾವತಿ ಸೇರಿದಂತೆ ಇನ್ನು ಮುಂತಾದವರು ಭಾಗಿಯಾಗಿದ್ದರು.