ಶೈಕ್ಷಣಿಕ ವ್ಯವಸ್ಥೆಗೆ ‘ಮಾರಕ’ ಸರ್ಕಾರಿ ಶಾಲಾ ಕಟ್ಟಡಗಳು..!

ಮೇಘಾ ಪಾಲೆತ್ತಾಡಿ
ಪುತ್ತೂರು; ಕಡಬ ತಾಲೂಕಿನ ಕುಂತೂರು ಪ್ರಾಥಮಿಕ ಶಾಲಾ ಕಟ್ಟಡ ಕುಸಿಯುವ ಮೂಲಕ ಇದೀಗ ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳು ಹಳೆಯ ಹೆಂಚಿನ ಕಟ್ಟಡಗಳಾಗಿದ್ದು, ಈ ಕಟ್ಟಡಗಳ ಸುರಕ್ಷತೆ ಹಾಗೂ ಅಂತಹ ಕಟ್ಟಡದ ತರಗತಿಗಳಲ್ಲಿ ಕುಳಿತು ಓದುವ ಮಕ್ಕಳ ಭವಿಷ್ಯದ ಪ್ರಶ್ನೆ ಎಲ್ಲರನ್ನೂ ಕಾಡುವಂತಾಗಿದೆ. ಜಿಲ್ಲೆಯ ಪುತ್ತೂರು ತಾಲೂಕಿನ ರಾಗಿಕುಮೇರು ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವೂ ಸೇರಿದಂತೆ ಸುಮಾರು ೨೬ ತರಗತಿಗಳು ನಾದುರಸ್ಥಿಯಲ್ಲಿವೆ. ಇದನ್ನು ದುರಸ್ಥಿ ಮಾಡುವ ಸ್ಥಿತಿಯಲ್ಲಿಲ್ಲ. ಕಡಬ ತಾಲೂಕಿನಲ್ಲಿ ೪೪ ಕಟ್ಟಡಗಳು ನಾದುರಸ್ಥಿಯಲ್ಲಿವೆ. ಜಿಲ್ಲೆಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ತರಗತಿ ಕಟ್ಟಡಗಳು ಅತೀ ಅಪಾಯಕಾರಿ ಸ್ಥಿತಿಯಲ್ಲಿವೆ ಎಂದು ತಿಳಿದುಬಂದಿದೆ.
ಈ ಬಾರಿಯ ಮಳೆಯ ತೀವ್ರತೆ ಹಾಗೂ ಗಾಳಿಯಿಂದಾಗಿ ಗ್ರಾಮೀಣ ಭಾಗಗಳೂ ಸೇರಿದಂತೆ ಜಿಲ್ಲೆಯಲ್ಲಿರುವ ಹಳೆಯ ಶಾಲಾ ಕಟ್ಟಡಗಳು ಮತ್ತಷ್ಟು ಅಪಾಯಕ್ಕೆ ಸಿಲುಕಿವೆ. ಇದರಲ್ಲಿ ಕಲಿಯುತ್ತಿರುವ ಮಕ್ಕಳ ಬದುಕು ಕೂಡಾ ಸಂಕಷ್ಟದ್ದಾಗಿದೆ. ಇದಕ್ಕೆ ಕುಂತೂರು ಶಾಲಾ ಪ್ರಕರಣ ಪ್ರತ್ಯಕ್ಷ ಉದಾಹರಣೆಯದ್ದಾಗಿದೆ.  ಈ ಕಾರಣದಿಂದ ಮೊದಲೇ ಮಕ್ಕಳ ಕೊರತೆ ಕಾಣುತ್ತಿರುವ ಸರ್ಕಾರಿ ಶಾಲೆಗಳ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿತಕ್ಕೆ ಕಾರಣವಾಗಲಿದೆ. ಶಾಲಾ ಕಟ್ಟಡಗಳ ಅಪಾಯದ ಸ್ಥಿತಿ ಪೋಷಕರಲ್ಲಿ ಭಯ ಹುಟ್ಟಿಸುತ್ತಿರುವ ಕಾರಣ ಪಕ್ಕದ ಖಾಸಗಿ ಶಾಆಲೆಗಳಿಗೆ ಲಾಭವಾಗಲಿದೆ.
ಪುತ್ತೂರು-ಕಡಬ ತಾಲೂಕುಗಳನ್ನೂ ಸೇರಿಸಿ ಜಿಲ್ಲೆಯಲ್ಲಿರುವ ಶೇ.೮೦ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಗಳು ೫೦ರಿಂದ ೧೦೦ ವರುಷದ ಆಯುಷ್ಯದ್ದಾಗಿವೆ. ಈ ಕಟ್ಟಡಗಳು ಹೆಂಚಿನ ಮಾಡು ಹೊಂದಿವೆ. ಬಹುತೇಕ ಶಾಲೆಗಳಲ್ಲಿ ಮರದ ಪಕ್ಕಾಸುಗಳೇ ಇಂದಿಗೂ ಇವೆ. ದುರಸ್ಥಿ ನಡೆದ ೬ ತಿಂಗಳಲ್ಲಿ ಮತ್ತೆ ದುರಸ್ಥಿಗೆ ತಯಾರಾಗುವ ಇಂತಹ ಛಾವಣಿ ಹೊಂದಿದ ಶಾಲಾ ಕಟ್ಟಡಗಳು ಮಕ್ಕಳ ಪಾಲಿಗೆ ಮಾತ್ರವಲ್ಲ ಸರ್ಕಾರಿಶಾಲೆಗಳ ಶೈಕ್ಷಣಿಕ ವ್ಯವಸ್ಥೆಗೇ ಅಪಾಯಕಾರಿಯಾಗಿವೆ..!
ಇಂತಹ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಕುಂತೂರು ಸೇರಿದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯಗುರುಗಳು ಹಾಗೂ ಶಾಲಾ ಎಸ್ ಡಿಎಂಸಿ ಸಮಿತಿಗಳು ಶಿಕ್ಷಣ ಇಲಾಖೆಗೆ ಮನವಿ ಮೇಲೆ ಮನವಿ ನೀಡಿವೆ. ಆದರೆ ಸರ್ಕಾರ ಕೇವಲ ತೇಪೆ ಹಚ್ಚುವ ಕಾಮಗಾರಿ ಮಾತ್ರ ಮಾಡುತ್ತಿದೆ, ಬದಲಿಗೆ ವರ್ಷಕ್ಕೊಂದು ತರಗತಿ ಆರ್‌ಸಿಸಿ ಕಟ್ಡಡ ಕೊಡುತ್ತಿದ್ದರೂ ಈಗ ಬಹುತೇಕ ಸರ್ಕಾರಿ ಶಾಲೆಗಳು ಸುಭದ್ರ ಸ್ಥಿತಿಯಲ್ಲಿರುತ್ತಿದ್ದವು ಎಂಬ ಪೋಷಕರ ಅನಿಸಿಕೆ ಸುಳ್ಳಲ್ಲ.
ಅಪಾಯ ಕಟ್ಟಡಗಳ ನೆಲಸಮ
ರಾಗಿಕುಮೇರು ಸೇರಿದಂತೆ ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲೆಗಳ ಕಟ್ಟಡ ಪರಿಶೀಲನೆ ನಡೆಸಲಾಗುವುದು. ಇಂಜಿನಿಯರ್ ಗಳ ಅಭಿಪ್ರಾಯ ಪಡೆದುಕೊಂಡು ಕಟ್ಟಡಗಳ ಸಭದ್ರವಾಗಿಲ್ಲದ ಕಡೆಗಳಲ್ಲಿ ಅಂತಹ ಕಟ್ಟಡಗಳನ್ನು ನೆಲಸಮ ಮಾಡುವ ಕ್ರಮ ಕೈಗೊಳ್ಳಲಾಗುವುದು. ಕಟ್ಟಡಗಳ ಭದ್ರವಾಗಿವೆ. ಯಾವುದೇ ಅಪಾಯ ಇಲ್ಲ ಎಂದು ಇಂಜಿನಿಯರ್ ಗಳಿಂದ ಬಂದರೆ ಅಂತಹ ಕಟ್ಟಡಗಳಲ್ಲಿ ದುರಸ್ಥಿ ಕೆಲಸ ನಡೆಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್. ಪತ್ರಿಕೆಗೆ ಮಾಹಿತಿ ನೀಡಿದರು.
ಮುಖ್ಯಗುರು-ಇಂಜಿನಿಯರ್ ಸಸ್ಪೆಂಡ್..
ಕುಂತೂರು ಶಾಲಾ ಪ್ರಕರಣದಲ್ಲಿ ಉಳಿದ ಕಟ್ಟಡದ ತರಗತಿಗಳು ಸುರಕ್ಷಿತವಾಗಿಲ್ಲ. ಹಾಗಾಗಿ ಸ್ಥಳೀಯ ಮನೆಯೊಂದರಲ್ಲಿ ಮಕ್ಕಳಿಗೆ ತಾತ್ಕಾಲಿಕ ಶಿಕ್ಷಣದ ವ್ಯವಸ್ಥೆ ಮಾಡಲಾಗಿದೆ. ಬೇಜವ್ದಾರಿ ವರ್ತನೆಯ ಹಿನ್ನಲೆಯಲ್ಲಿ ಶಾಲೆಯ ಮುಖ್ಯಗುರು ಹಾಗೂ ಇಂಜಿನಿಯರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
—ಕೋಟ್–
ಸುಳ್ಯದಲ್ಲಿ ೭೫ ವರ್ಷದ ಶಾಲೆಗಳೇ ಅಧಿಕ;
ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಶಾಲೆಗಳ ಕಟ್ಟಡಗಳು ೭೫ ವರ್ಷಕ್ಕಿಂತ ಹೆಚ್ಚಿನದ್ದಾಗಿವೆ. ಈ ಬಾರಿ ಸರ್ಕಾರಕ್ಕೆ ಸುಮಾರು ೨೦೦ ಕೋಟಿಯ ಪ್ರಸ್ತಾವನೆ ಮೂಲಕ ಹೊಸ ಕಟ್ಟಡಗಳ ಅನಿವಾರ್ಯತೆ ಬಗ್ಗೆ ತಿಳಿಸಿದ್ದೇನೆ. ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಾದರೆ ಮೂಲಭೂತ ಸೌಕರ್ಯವಾದ ಕಟ್ಟಡಗಳನ್ನು ನೀಡುವ ಕೆಲಸಕ್ಕೆ ಆದ್ಯತೆ ನೀಡಬೇಕು- ಭಾಗೀರತಿ ಮುರುಳ್ಯ ಶಾಸಕರು ಸುಳ್ಯ.