ಕಾಂಗ್ರೇಸ್ ಗೆ ತಕ್ಕ ಪಾಠ ಜನರಿಂದ-ಶಾಸಕ ಭರತ್ ಶೆಟ್ಟಿ ಎಚ್ಚರಿಕೆ

ಪುತ್ತೂರು: ಮಿತಿಮೀರಿದ ಭ್ರಷ್ಟಾಚಾರ ಹಾಗೂ ಅಧಿಕಾರ ದುರ್ಬಳಕೆಯ ಕೆಟ್ಟ ಆಡಳಿತವನ್ನು ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಸಂಘರ್ಷದಿಂದಲೇ ಹುಟ್ಟಿದ ಬಿಜೆಪಿ ಪಕ್ಷ ಸಂಘರ್ಷಕ್ಕೆ ಇಳಿದರೆ ಏನಾಗಬಹುದು ಎನ್ನುವುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದರು.
ಬುಧವಾರ ಸಂಜೆ ಕಾಂಗ್ರೆಸ್ ನಾಯಕರ ವಿರುದ್ಧ ಪುತ್ತೂರು ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ದರ್ಬೆ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಬಳಿ ಭಿಕ್ಷೆ ಪಾತ್ರೆ ಹಿಡಿದು ಐವನ್‌ಗೆ ಸ್ಥಾನ ಲಭಿಸಿದೆ. ರಾಜ್ಯಪಾಲರ ವಿರುದ್ಧ ಮಾತನಾಡಿದ ಐವನ್ ಮೇಲೆ ಪ್ರಕರಣ ದಾಖಲಿಸಲು ನಾನೇ ಪೊಲೀಸ್ ಕಮಿಷನರಿಗೆ  ಸೆಕ್ಷನ್ ಕಳುಹಿಸಿದ್ದೆ. ಹಿಂದೆ ನಾನು ಸ್ಥಳದಲ್ಲಿ ಇಲ್ಲದಿದ್ದರೂ  ಕೇಸ್ ಹಾಕಿದ್ರು. ನಿಮ್ಮ  ಕೇಸ್ ನಮಗೆ  ಲೆಕ್ಕವೇ ಅಲ್ಲ. ಇದು ಟ್ರೈಲರ್ ಹೋರಾಟ ಮಾತ್ರ. ಮುಂದೆ ತೀವ್ರ ಹೋರಾಟ ಇದೆ ಎಂದರು.
ಮಾಜಿ ಶಾಸಕ ಸಂಜೀವ ಮಟಂದೂರು ಮಾತನಾಡಿ, ಭ್ರಷ್ಟ ಸರ್ಕಾರದ ವಿರುದ್ಧ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಈ ಕೆಟ್ಟ ಆಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಆರ್.ಸಿ. ನಾರಾಯಣ,
ಜೀವಂಧರ್ ಜೈನ್, ಬೂಡಿಯಾರ್ ರಾಧಾಕೃಷ್ಣ ರೈ, ರಾಧಾಕೃಷ್ಣ ಬೋರ್ಕರ್, ಪಿ.ಜಿ. ಜಗನನಿವಾಸ್ ರಾವ್, ವಿದ್ಯಾ ಗೌರಿ, ವಸಂತ ಲಕ್ಷ್ಮಿ, ದಿವ್ಯಾ ಪುರುಷೋತ್ತಮ, ಮುರಳಿಕೃಷ್ಣ ಹಸಂತಡ್ಕ, ಅಪ್ಪಯ್ಯ ಮಣಿಯಣಿ, ಮೋಹನ್ದಾಸ್ ಉಕ್ಕುಡ, ಡಾ. ಕೃಷ್ಣ ಪ್ರಸನ್ನ, ರಾಜೇಶ್ ಬನ್ನೂರು, ಯುವರಾಜ್ ಪೆರಿಯಾತೋಡಿ, ಪ್ರಸನ್ನ ಮಾರ್ತಾ, ಹರೀಶ್ ಬಿಜತ್ರೆ, ಶಶಿಕಲಾ, ಮೋಹಿನಿ ವಿಶ್ವನಾಥ, ಜಯಶ್ರೀ ಶೆಟ್ಟಿ, ನಾಗೇಶ್ ಕೆಮ್ಮಾಯಿ, ಅನಿಲ್ ತೆಂಕಿಲ, ನಿತೇಶ್, ಶಿಶಿರ್ ಮೊದಲಾದವರಿದ್ದರು.
ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ  ಶ್ರೀಕೃಷ್ಣ ಎಂ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ವಿರೂಪಾಕ್ಷ ಭಟ್ ಸ್ವಾಗತಿಸಿದರು. ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು.
ರಸ್ತೆ ತಡೆ
ಬಳಿಕ ನೂರಾರು ಮಂದಿ ಕಾರ್ಯಕರ್ತರು ಹಾಗೂ ಮುಖಂಡರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರು ಮನವೊಲಿಕೆ ಪ್ರಯತ್ನ ನಡೆಸಿದರೂ ೨೦ ನಿಮಿಷಗಳ ಕಾಲ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.