ನೀರಿನಲ್ಲಿ ಮುಳುಗಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು; ಇನ್ನೋರ್ವ ಗಂಭೀರ
ಮಣಿಪಾಲ- ಅಲೆವೂರಿನ ನೈಲಪಾದೆ ನದಿಯಲ್ಲಿ ಈಜಲು ತೆರಳಿ ನೀರಿನಲ್ಲಿ ಮುಳುಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ತ್ರಿವೆಂಡಮ್‌ನ ಆರೊನ್ ರೋಜರ್ ಲೀನ್(೧೭) ಮೃತ ವಿದ್ಯಾರ್ಥಿ. ಕೋಲ್ಕತ್ತಾದ ಮಾಧವ್(೧೮) ಸ್ಥಿತಿ ಚಿಂತಾಜನಕವಾಗಿದೆ.
ಆ. ೨೫ರಂದು ನದಿಗೆ ಈಜಲು ನಾಲ್ವರು ವಿದ್ಯಾರ್ಥಿಗಳು ತೆರಳಿದ್ದರು. ಈ ಪೈಕಿ ಆರೊನ್ ಹಾಗೂ ಮಾಧವ್ ನೀರಿನಲ್ಲಿ ಮುಳುಗಡೆಯಾಗಿದ್ದರು. ಇದೀಗ ಆರೊನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮಾಧವ್ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಘಟನೆ ನಡೆದ ವೇಳೆ ಇಬ್ಬರು ವಿದ್ಯಾರ್ಥಿಗಳು ಪಾರಾಗಿದ್ದರು. ನೀರಿನಲ್ಲಿ ಮುಳುಗಡೆಯಾಗಿದ್ದವರನ್ನು ಸ್ಥಳೀಯರು ಕೂಡಲೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಮೃತ ವಿದ್ಯಾರ್ಥಿ ಆರೊನ್ ಪೋಷಕರು ವಿದೇಶದಿಂದ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.