ಶಾಂತರಸರ ಬದುಕು ಬರಹ ಹೋರಾಟ ಇತರರಿಗೆ ಮಾದರಿ: ದರ್ಶನಾಪುರ
ಕಲಬುರಗಿ,ಆ.28-ಶಾಂತರಸರ ಬದುಕು, ಬರಹ ಮತ್ತು ಹೋರಾಟ ಇತರರಿಗೆ ಮಾದರಿಯಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಶಹಾಪುರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಶಹಾಪುರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಿರಿಯ ಸಾಹಿತಿ ಶಾಂತರಸರ ಜನ್ಮಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಗಜಲ್ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ಧರಾಮ ಹೊನ್ಕಲ್ ಅವರ “ನಿನ್ನ ಜೊತೆ ಜೊತೆಯಲಿ” ಗಜಲ್ ಕೃತಿ ಲೋಕಾರ್ಪಣೆ ಮಾಡಿ, ಸಿದ್ಧರಾಮ ಹೊನ್ಕಲ್ ಶಾಂತರಸರಂತೆ ಹೋರಾಟದ ಜೀವಿ. ಅವರು ಸಹ ಶಾಂತರಸರಂತೆ ಈ ಭಾಗದ ಸಾಹಿತಿಗಳಿಗೆ ನ್ಯಾಯ ಒದಗಿಸಲು ಹೋರಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
Àಗಜಲ್ ಕೃತಿ ಹಾಗೂ ಶಾಂತರಸರ ಕಥೆ ಕಾದಂಬರಿ ಕುರಿತು ಕಥೆಗಾರ ಮಹಾಂತೇಶ ನವಲಕಲ್ ಅರ್ಥಪೂರ್ಣವಾಗಿ ಮಾತನಾಡಿದರು. ಹೊನ್ಕಲ್‍ರ ಗಜಲ್ ಒಂದನ್ನು ಉಲ್ಲೇಖಿಸಿ ಬಹು ಸುಂದರ ಗಜಲ್ ಕಾವ್ಯ ಇವಾಗಿವೆ. ಸಿದ್ಧರಾಮ ಹೊನ್ಕಲ್ ಅವರು ಬರೆದ ಗಜಲ್ ಬಗೆಗಿನ ಆರಂಭದ ಪರಿಚಯ ಓದಿದವರೆಲ್ಲ ಗಜಲ್ ಕಾವ್ಯ ರಚಿಸಬಹುದು. ಅಷ್ಟು ಚೆಂದಾಗಿ ಸರಳವಾಗಿ ಶಾಂತರಸರಂತೆಯೇ ಇವರು ಸರಳವಾಗಿ, ಒಂದೇ ಓದಿಗೆ ಅರ್ಥವಾಗುವಂತೆ ಬರೆದಿದ್ದಾರೆ. ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.
ರಂಗಾಯಣ ಕಲಬುರಗಿಯ ನೂತನ ನಿರ್ದೇಶಕರಾದ ಡಾ.ಸುಜಾತ ಜಂಗಮ ಶೆಟ್ಟಿ ಅವರು ಶಾಂತರಸರ ಬದುಕು ಬರಹ ಕುರಿತು, ಬಸವಪ್ರಭು ಹೆಂಬಿರಾಳ ಅವರು ಶಾಂತರಸರ ಸಾಹಿತ್ಯ ಹಾಗೂ ಸಾಂಸ್ಕøತಿಕ ಕೊಡುಗೆ ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಸಾಪ ಅಧ್ಯಕ್ಷ ಡಾ.ರವೀಂದ್ರ ಹೊಸಮನಿ, ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಅಯ್ಯಣ್ಣ ಇನಾಮದಾರ ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಿದ್ಧರಾಮ ಹೊನ್ಕಲ್ ಅವರು ಮಾತನಾಡಿ, ಕನ್ನಡಕ್ಕೆ ಉರ್ದವಿನಿಂದ ಶಾಂತರಸರು ಗಜಲ್ ಕಾವ್ಯ ಪ್ರಕಾರವನ್ನು ತಂದರು. ಗಜಲ್ ಎಂಬುದು ಪ್ರೇಮಕಾವ್ಯ. ಅದನ್ನು ಕಾವ್ಯದ ರಾಣಿ ಎನ್ನುತ್ತಾರೆ. ಅದು ಗಂಡು ಹೆಣ್ಣಿನ ಮಧುರ ಭಾವಗಳನ್ನು, ನೋವು, ಹತಾಶೆ ದು:ಖ, ವಿರಹವನ್ನು, ಸಂತಸವನ್ನು ಕಟ್ಟಿಕೊಡುವ ಒಂದು ಕಾವ್ಯ ಪ್ರಕಾರವಾಗಿದೆ. ಎರಡು ಮನಸುಗಳ ಪಿಸುಮಾತಿನ ಕಾವ್ಯವಾಗಿದೆ. ಈಗೀಗ ಈ ಕಾವ್ಯ ಪ್ರಕಾರದಲ್ಲಿ ಸಹ ವರ್ತಮಾನದ ತಲ್ಲಣಗಳ ಕುರಿತು ಸಮಾಜಮುಖಿ ಆಶಯಗಳ ಕುರಿತು ಕಾವ್ಯ ರಚನೆ ಆಗುತ್ತಿದೆ. ಕನ್ನಡದಲ್ಲಿ ಈಗ ನನ್ನನ್ನು ಒಳಗೊಂಡಂತೆ ಮುನ್ನೂರಕ್ಕೂ ಹೆಚ್ಚು ಜನ ಗಜಲ್ ಕಾವ್ಯ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ನೂರಾರು ಕೃತಿಗಳು ಬಂದಿವೆ. ಸಚಿವ ದರ್ಶನಾಪುರ ಅವರು ನನ್ನ ಈವರೆಗಿನ ಸಮಗ್ರ ಗಜಲ್ ಗಳ ಸಂಕಲನ “ನಿನ್ನ ಜೊತೆ ಜೊತೆಯಲಿ” ಲೋಕಾರ್ಪಣೆ ಮಾಡಿರುವುದು ಅತ್ಯಂತ ಸಂತಸ ತಂದಿದೆ. ಅವರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರೇಮಿಗಳು ಆಗಿರೋದ್ರಿಂದ ಅವರಿಂದ ಲೋಕಾರ್ಪಣೆ ಮಾಡಿಸಿದ್ದು ಹೆಮ್ಮೆ ಅನಿಸಿದೆ ಎಂದರು. ಇಡೀ ಹೈದ್ರಾಬಾದ್ ಕರ್ನಾಟಕ ದ ಲೇಖಕರಿಗೆ ಅವಕಾಶ ಸಿಗಬೇಕು ಎಂದು ಹೋರಾಟ ಮಾಡಿದವರು ಶಾಂತರಸರು. ಅವರ ಜನ್ಮ ಶತಮಾನೋತ್ಸವದದ ಈ ಕಾರ್ಯಕ್ರಮದಲ್ಲಿ ಗಜಲ್ ಕೃತಿ ಲೋಕಾರ್ಪಣೆ ಆಗಿರುವುದು ಸಂತಸ ತಂದಿದೆ ಎಂದರು. ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರು ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.