ಜೀವನದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಕೌಶಲ್ಯ ತರಬೇತಿಗಳ ಸೌಲಭ್ಯ ಪಡೆದುಕೊಳ್ಳಿ ಜಿಲ್ಲಾಧಿಕಾರಿ ಡಾ. ಸುಶಿಲಾ ಬಿ.
ಯಾದಗಿರಿ: ಆ, 28:ಉದ್ಯೋಗಗಳಲ್ಲಿ ಹಾಗೂ ಜೀವನದಲ್ಲಿ ಇಟ್ಟುಕೊಂಡಿರುವ ಗುರಿ ಸಾಧಿಸಬೇಕಾದರೆ ತನ್ನದೇ ಆದ ಕೌಶಲ್ಯ ಹೊಂದಿರುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶಿಲಾ ಬಿ. ಅವರು ನಿರ್ದೇಶಿಸಿದರು.
ನಗರದ ಸರಕಾರಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ಮಹತ್ವಕಾಂಕ್ಷಿ ಜಿಲ್ಲೆ ಯೋಜನೆಯಡಿಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗುವ ವಿವಿಧ ಕೌಶಲ್ಯ ತರಬೇತಿಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಪ್ರತಿಯೊಬ್ಬರಿಗೆ ತನ್ನದೇ ಆದ ಗುರಿ ಇರುತ್ತದೆ, ಆ ಗುರಿ ತಲುಪಲು ಸತತ ಪರಿಶ್ರಮ ಅಗತ್ಯವಾಗಿದೆ. ಅದೇ ರೀತಿ ತಾವು ವಿದ್ಯಾರ್ಥಿ ಜೀವನ ಪೂರ್ಣಗೊಳಿಸಿದ ನಂತರ ಉದ್ಯೋಗಕ್ಕಾಗಿ ಪ್ರಯತ್ನ ಮಾಡುವುದು ಸಾಮಾನ್ಯ, ಕೆಲವರು ಸರಕಾರಿ ನೌಕರಿ ಮಾಡಬಹುದು, ಕೆಲವರು ಸ್ವಯಂ ಉದ್ಯೋಗ ಮಾಡಬಹುದು ತಮ್ಮದೇ ಆಗಿರುವಂತಹ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದರು
ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯಡಿಯಲ್ಲಿ ಜಿಲ್ಲಾ ಕೌಶಲ್ಯ ಕೇಂದ್ರವು ಸ್ಥಾಪನೆಯಾಗಿದ್ದು, ಸದರಿ ಕೇಂದ್ರದಲ್ಲಿ ಕಳೆದ ಸಾಲಿನಲ್ಲಿ 360 ವಿದ್ಯಾರ್ಥಿಗಳಿಗೆ ಉಚಿತವಾಗಿ ಉಚಿತವಾಗಿ ಐಎಎಸ್, ಕೆಎಎಸ್, ಪಿಎ???, ಬ್ಯಾಂಕಿಂಗ್, ಶಿಕ್ಷಕರು, ಉಪನ್ಯಾಸಕರು, ಎಫ್ ಡಿ ಎ ಮತ್ತು ಎಸ್ ಡಿ ಎ ಪರೀಕ್ಷೆಗಳನ್ನು ಎದುರಿಸಲು ಜಿಲ್ಲಾ ಮಹತ್ವಕಾಂಕ್ಷಿ ಯೋಜನೆಯಡಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ನೀಡಲಾಗಿರುತ್ತದೆ. ಅಲ್ಲದೇ ಪ್ರಸ್ತುತ ಸದರಿ ಕೇಂದ್ರದಲ್ಲಿ ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರಿಗಾಗಿ ಫೀಲ್ಡ್ ಟೆಕ್ನಿಷಿಯನ್, ಎಲೆಕ್ಟ್ರಿಕಲ್ ವಿಂಡರ್ ಮತ್ತು ಬ್ಯಾಂಕಿಂಗ್ ಟೆಕ್ನಿಷಿಯಲ್ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಪ್ರಸ್ತುತ ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ತರಬೇತಿ ನೀಡಿ ಉದ್ಯೋಗವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಮನವಿಯಂತೆ, ಜಿಲ್ಲಾ ಮಹತ್ವಕಾಂಕ್ಷಿ ಯೋಜನೆಯಡಿ ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರಿಗಾಗಿ ಲೈಟ್ ಮೋಟಾರ್ ವೆಹಿಕಲ್ ಡ್ರೈವಿಂಗ್, ಸೆಕ್ಯುರಿಟಿ ಗಾರ್ಡ್, ಹೌಸ್ ಕೀಪಿಂಗ್ ವಿಷಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ನಿರುದ್ಯೋಗ ಯುವಕ-ಯುವತಿಯರು ಸದರಿ ತರಬೇತಿಗಳ ಉಪಯೋಗವನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲಾ ಕೌಶಲ್ಯ ಮಿಷನ್ ಸಹಾಯಕ ನಿರ್ದೇಶಕ ಬಸಪ್ಪ ತಳವಡಿ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಕೌಶಲ್ಯ ಕೇಂದ್ರದಲ್ಲಿ ಈಗಾಗಲೇ ಹಲವಾರು ವಿಷಯಗಳಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಸದರಿ ತರಬೇತಿಗಳಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಸ್ವಯಂ ಉದ್ಯೋಗ ಕೈಗೊಳ್ಳುವ ನಗರ ಪ್ರದೇಶದ ಅಭ್ಯರ್ಥಿಗಳು ಸಾಲದ ಅವಶ್ಯಕತೆ ಇದ್ದಲ್ಲಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಡೇ-ನಲ್ಮ್ ಯೋಜನೆಯಡಿ ಸಾಲ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತೀದೆ, ಸದರಿ ಅವಕಾಶವನ್ನು ಸಹ ತಾವು ಉಪಯೋಗಿಸಿಕೊಳ್ಳಬಹುದು. ಸದರಿ ತರಬೇತಿಗಳಿಗಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಿಲ್ಲಾ ಉದ್ಯೋಗ ವಿನಿಯಮ ಅಧಿಕಾರಿ ಪ್ರಭಾಕರ, ಜಿಲ್ಲಾ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಲಕ್ಷ್ಮೀಕಾಂತ ಮಿಶ್ರ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಮಹೇಶ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಮತ್ತು ನಗರಸಭೆ ಯಾದಗಿರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ವಿಠೋಬ ಕಾರ್ಯಕ್ರಮ ನಿರೂಪಿಸಿದರು ಇನ್ನೋರ್ವ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ ವಂದನಾರ್ಪಣೆ ಮಾಡಿದರು